ಚೆನ್ನೈ: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ (ಡಬ್ಲ್ಯೂಟಿಸಿ) 1000 ರನ್ ಬಾರಿಸಿರುವ ಭಾರತದ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ, ಏಷ್ಯಾದ ಮೊದಲ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ.
ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಎರಡನೇ ಟೆಸ್ಟ್‌ನಲ್ಲಿ ರಹಾನೆ ವಿಶೇಷ ದಾಖಲೆ ಬರೆದರು. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದಿದ್ದ ರಹಾನೆ, 31 ರನ್ ಗಳಿಸಿದ್ದಾಗ ಈ ಸಾಧನೆ ಮಾಡಿದರು.
ಹೆಚ್ಚು ರನ್ ಸ್ಕೋರರ್ ಪಟ್ಟಿಯಲ್ಲಿ ರಹಾನೆ ಐದನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್ 1675 ರನ್ ಬಾರಿಸಿ ಅಗ್ರ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಜೋ ರೂಟ್ (1550 ರನ್), 3ನೇ ಸ್ಥಾನದಲ್ಲಿ ಸ್ಟೀವ್ ಸ್ಮಿತ್ (1341), ನಾಲ್ಕನೇ ಸ್ಥಾನದಲ್ಲಿ ಬೆನ್ಸ್ಟೋಕ್ಸ್ (1220) ನಂತರದ ಸ್ಥಾನದಲ್ಲಿ ರಹಾನೆ (1051) ಇದ್ದಾರೆ.
ಸದ್ಯ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯು ಫೈನಲ್ ಸ್ಪರ್ಧಿಯನ್ನು ನಿರ್ಧರಿಸಲಿದೆ. ನ್ಯೂಜಿಲೆಂಡ್ ಈಗಾಗಲೇ ಫೈನಲ್ ಪ್ರವೇಶಿಸಿದೆ.