ಸಿಡ್ನಿ: ಐದು ಪಂದ್ಯಗಳ ಆ್ಯಶಸ್ ಸರಣಿಗಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡವು ಆಸ್ಟ್ರೇಲಿಯಾಕ್ಕೆ ತೆರಳುತ್ತದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಇದ್ದ ಕೂತೂಹಲ ಕೊನೆಗೂ ಮುಗಿದಿದೆ ಎನ್ನಲಾಗುತ್ತಿದ್ದು, ನಾಯಕ ಜೋ ರೂಟ್ ಅವರು ಸರಣಿಗಾಗಿ ಡೌನ್ ಅಂಡರ್ಗೆ ಪ್ರಯಾಣ ಮಾಡುತ್ತಿರುವುದನ್ನು ಖಚಿತಪಡಿಸಿದ್ದಾರೆ ಎಂದು ಕೆಲವು ಇಂಗ್ಲಿಷ್ ಪತ್ರಿಕೆಗಳು ವರದಿ ಮಾಡಿವೆ.
ಈ ಕುರಿತು ಇನ್ನೂ ಎರಡೂ ಕ್ರಿಕೆಟ್ ಮಂಡಳಿಗಳು ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡದಿದ್ದರೂ ಯುಕೆ ನ್ಯೂಸ್ ಪೇಪರ್ಗಳು ಸರಣಿ ವೇಳಾಪಟ್ಟಿಯಂತೆ ನಡೆಯಲಿದೆ. ಒಂದು ವಾರದ ನಂತರ ಈ ಕುರಿತು ಔಪಚಾರಿಕವಾಗಿ ಘೋಷಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಇಂಗ್ಲಿಷ್ ಆಟಗಾರರು ಕ್ರಿಸ್ಮಸ್ ಮತ್ತು ಹೊಸವರ್ಷಕ್ಕೆ ತಮ್ಮ ಕುಟುಂಬಗಳ ಜೊತೆ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ ಎಂಬುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೆಲವು ವಾರಗಳ ನಂತರ ಇಸಿಬಿ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗಳು ಕಠಿಣ ಕ್ವಾರಂಟೈನ್ ಅವಶ್ಯಕತೆಗಳ ಬಗ್ಗೆ ಮಾತುಕತೆ ನಡೆಸುತ್ತಿವೆ ಎಂದು ಇಂಗ್ಲಿಷ್ ಪತ್ರಿಕೆ ಸೆನ್(Sen.com) ವರದಿ ಮಾಡಿದೆ.
ಹೋಟೆಲ್ನಲ್ಲಿ ಕಟ್ಟುನಿಟ್ಟಿನ ಕ್ವಾರಂಟೈನ್ ಮಾಡುವ ಬದಲು ವಿಕ್ಟೋರಿಯಾದ ಯರ್ರಾ ಕಣಿವೆಯ ರೆಸಾರ್ಟ್ನಲ್ಲಿ ಆಟಗಾರರ ಕುಟುಂಬಗಳನ್ನು ಕ್ವಾರಂಟೈನ್ ಮಾಡುವುದಕ್ಕೆ ಒಪ್ಪಿಗೆ ಸೂಚಿಸಿದ ಬಳಿಕ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಈ ಪ್ರವಾಸಕ್ಕೆ ಒಪ್ಪಿಗೆ ಸೂಚಿಸಿದ್ದಾರೆಂದು ಟೆಲಿಗ್ರಾಫ್ ವರದಿ ಮಾಡಿದೆ.
ಪ್ರವಾಸ ಕುರಿತು ಇಸಿಬಿ ಮತ್ತು ಸಿಎ ನಡುವೆ ಸುದೀರ್ಘ ಚರ್ಚೆ ನಡೆಯುತ್ತಿವೆ. ಅಕ್ಟೋಬರ್ 4ರಂದು ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಅಧಿಕಾರಿಗಳಿಗೆ ಆಸೀಸ್ ಪ್ರವಾಸ ಕೈಗೊಳ್ಳುವ ತಂಡ ತಾವೂ 11 ವಾರಗಳ ಸುದೀರ್ಘ ಪ್ರವಾಸದಲ್ಲಿ ತಾವೂ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ವಿವರಿಸಿದೆ ಎಂದು ತಿಳಿದುಬಂದಿದೆ.
ಆಸ್ಟ್ರೇಲಿಯಾದಲ್ಲಿ ಕಠಿಣ ಕೋವಿಡ್ ಪ್ರೋಟೋಕಾಲ್ಗಳನ್ನು ಜಾರಿಗೆ ತಂದಿದ್ದು, ದೇಶಕ್ಕೆ ಬರುವವರಿಗೆ ಕಠಿಣ ಕ್ವಾರಂಟೈನ್ ನಿಯಮಗಳನ್ನು ಸರ್ಕಾರ ಜಾರಿಗೆ ತಂದಿದೆ. ಜೊತೆಗೆ ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಗಾಗಿ ದೇಶಕ್ಕೆ ಬರುವ ಕ್ರಿಕೆಟಿಗರು ಕುಟುಂಬವನ್ನು ಕರೆತರಲೂ ಸಹಾ ನಿಷೇಧವೇರಿತ್ತು. ಆದರೆ, ಇದಕ್ಕೆ ಇಂಗ್ಲೆಂಡ್ ಕ್ರಿಕೆಟಿಗರು ವಿರೋಧ ವ್ಯಕ್ತಪಡಿಸಿದ್ದರು. ಈ ಗೊಂದಲ ನಿವಾರಿಸಲು ಸ್ವತಃ ಇಂಗ್ಲೆಂಡ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅಕಾಡಕ್ಕೆ ಇಳಿದು ಆಸ್ಟ್ರೇಲಿಯಾ ಸರ್ಕಾರಕ್ಕೆ ತಮ್ಮ ದೇಶದ ಆಟಗಾರರ ಕುಟುಂಬಗಳ ಪ್ರಯಾಣಕ್ಕೆ ಅವಕಾಶ ಕೊಡಬೇಕೆಂದು ಮನವಿ ಮಾಡಿದ್ದರು.
ಇದನ್ನು ಓದಿ:ಹಾಕಿ..FIH ವಾರ್ಷಿಕ ಪ್ರಶಸ್ತಿಗಳೆಲ್ಲವನ್ನು ಬಾಚಿಕೊಂಡ ಭಾರತ: ಬೆಲ್ಜಿಯಂ ಅಸಮಾಧಾನ