ಬಾರ್ಬಡೊಸ್: ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ವೆಸ್ಟ್ ಇಮಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಶತಕ ದಾಖಲಿಸಿದ್ದಾರೆ. ಈ ಮೂಲಕ ವೃತ್ತಿಜೀವನದ 25ನೇ ಮತ್ತು ಕಳೆದ 15 ತಿಂಗಳಲ್ಲಿ 8ನೇ ಶತಕ ಸಿಡಿಸಿ ಅವರು ಸಂಭ್ರಮಿಸಿದರು.
ಬಾರ್ಬಡೊಸ್ನಲ್ಲಿ ಬುಧವಾರದಿಂದ ಆರಂಭವಾಗಿರುವ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವೇ ರೂಟ್ ಶತಕ ಸಾಧನೆ ಮಾಡಿದರು. ಇದು ಸರಣಿಯಲ್ಲಿ ಅವರ 2ನೇ ಶತಕವಾಗಿದೆ. 2021ರ ಆರಂಭದ ನಂತರ ಇಂಗ್ಲೆಂಡ್ ಕ್ಯಾಪ್ಟನ್ ಸಿಡಿಸಿದ 8ನೇ ಶತಕ ಎನ್ನುವುದು ಮತ್ತೊಂದು ವಿಶೇಷ.
ರೂಟ್ 2021ರಲ್ಲಿ ಶ್ರೀಲಂಕಾ ಪ್ರವಾಸದಲ್ಲಿ 2 ಶತಕ (228 ಮತ್ತು 186) ನಂತರ ಭಾರತ ಪ್ರವಾಸದಲ್ಲಿ ಒಂದು ಶತಕ (218), ನಂತರ ತವರಿನಲ್ಲಿ ಭಾರತದ ವಿರುದ್ದ 3 ಶತಕ (109, 180, 121) ಇದೀಗ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ 2ನೇ ಶತಕ ದಾಖಲಿಸಿದ್ದಾರೆ.
ವಿಶೇಷವೆಂದರೆ ವಿಶ್ವ ಕ್ರಿಕೆಟ್ನ ಫ್ಯಾಬ್ 4 ಎಂದು ಗುರುತಿಸಿಕೊಂಡಿರುವ ಕೊಹ್ಲಿ, ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್ ಮತ್ತು ಜೋ ರೂಟ್ 2021ರ ಅಂಕಿ ಅಂಶದ ಪ್ರಕಾರ ಕ್ರಮವಾಗಿ 27, 26, 24 ಮತ್ತು 17 ಶತಕ ಸಿಡಿಸಿದ್ದರು. ಆದರೆ ಈ 15 ತಿಂಗಳಲ್ಲಿ ರೂಟ್ 8 ಶತಕ ಸಿಡಿಸಿ ತಮ್ಮ ಶತಕದ ಸಂಖ್ಯೆಯನ್ನು 26ಕ್ಕೇ ಏರಿಸಿಕೊಂಡಿದ್ದಾರೆ. ಸ್ಮಿತ್ ಒಂದು ಶತಕ ಸಿಡಿಸಿದ್ದರೆ, ವಿಲಿಯಮ್ಸನ್ ಮತ್ತು ಕೊಹ್ಲಿ ಶತಕ ಸಿಡಿಸುವಲ್ಲಿ ವಿಫಲರಾಗಿದ್ದಾರೆ.
ಇದನ್ನೂ ಓದಿ: 'ಆಮ್ ಆದ್ಮಿ'ಯಾಗಿ ರಾಜ್ಯಸಭೆ ಪ್ರವೇಶಿಸಲಿದ್ದಾರೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್