ಮುಲ್ತಾನ್(ಪಾಕಿಸ್ತಾನ): ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಣ ಮೂರು ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ 26 ರನ್‌ಗಳಿಂದ ವಿಜಯ ಸಾಧಿಸಿತು. 17 ವರ್ಷಗಳ ಬಳಿಕ ಇಂಗ್ಲೆಂಡ್ ತಂಡವು ಪಾಕಿಸ್ತಾನಕ್ಕೆ ಟೆಸ್ಟ್ ಸರಣಿಗಾಗಿ ಆಗಮಿಸಿದ್ದು, ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು 2-0 ಮೂಲಕ ಕೈವಶ ಮಾಡಿಕೊಂಡಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿಯೂ ಬೆನ್ ಸ್ಟೋಕ್ಸ್ ಪಡೆ ಜಯಗಳಿಸಿತ್ತು. ಎರಡನೇ ಪಂದ್ಯದಲ್ಲಿ ಸವಾಲಿನ ಮೊತ್ತ ಬೆನ್ನತ್ತಿದ ಪಾಕ್ 328 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು ಮತ್ತೆ ಇಂಗ್ಲೆಂಡ್‌ಗೆ ಶರಣಾಯಿತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 281 ರನ್‌ಗಳಿಸಲಷ್ಟೇ ಶಕ್ತವಾಯಿತು. ಬೆನ್ ಡಕೆಟ್ (63) ಮತ್ತು ಓಲಿ ಪೋಪ್ (61) ಗಳಿಸಿದ್ದು ಬಿಟ್ಟರೆ ಬೇರಾವ ಆಟಗಾರರೂ ಉತ್ತಮ ಪ್ರದರ್ಶನ ನೀಡಲಿಲ್ಲ. ಪಾಕ್ ಪರ ಅಬ್ರಾರ್ ಅಹ್ಮದ್ 7 ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ಆಟಗಾರರನ್ನು ಇನ್ನಿಲ್ಲದಂತೆ ಕಾಡಿದರು. ಝಾಹಿದ್ ಮಹ್ಮೂದ್ 3 ವಿಕೆಟ್ ಉರುಳಿಸಿದರು.
ಈ ಸಾಧಾರಣ ಗುರಿ ಬೆನ್ನತ್ತಿದ ಪಾಕ್ 202 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ಪಾಕ್ ಪರ ಬಾಬರ್ ಅಜಂ(75) ಮತ್ತು ಸೌದ್ ಶಕೀಲ್(63) ಉತ್ತಮ ರನ್ ಗಳಿಸಿದ್ದು ಬಿಟ್ಟರೆ ಬೇರೆಲ್ಲ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ಇಂಗ್ಲೆಂಡ್ ಪರ ಜಾಕ್ ಲೀಚ್ 4, ಜೋ ರೂಟ್ 2 ವಿಕೆಟ್ ಕಬಳಿಸಿದ್ದಾರೆ.
2ನೇ ಇನ್ನಿಂಗ್ಸ್ನಲ್ಲಿ ಮತ್ತೆ ಕುಸಿದ ಪಾಕ್: ಬಳಿಕ 79 ರನ್‌ಗಳ ಮುನ್ನಡೆಯಿಂದ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಹ್ಯಾರಿ ಬ್ರೂಕ್(108) ಶತಕ ಹಾಗೂ ಬೆನ್ ಡಕೆಟ್ (79) ಅವರ ಅರ್ಧಶತಕದ ನೆರವಿನಿಂದ 275 ರನ್ ಗಳಿಸಿತು. ಈ ಮೂಲಕ ಪಾಕ್ಗೆ 355 ರನ್‌ಗಳ ಗುರಿ ನೀಡಿತು.
ಬಳಿಕ ಬ್ಯಾಟಿಂಗ್ ನಡೆಸಿದ ಪಾಕ್‌ನ ಸೌದ್ ಶಕೀಲ್ (94) ಮತ್ತು ಇಮಾಮ್ ಉಲ್ ಹಕ್(60) ನೆರವಿನಿಂದ ಕೇವಲ 328 ರನ್ ತನ್ನೆಲ್ಲ ವಿಕೆಟ್ ಕಳೆದುಕೊಂಡು ಇಂಗ್ಲೆಂಡ್‌ಗೆ ಶರಣಾಯಿತು. ಇಂಗ್ಲೆಂಡ್ ಪರ ಮಾರ್ಕ್ ಹುಡ್ 65 ರನ್ಗೆ 4 ವಿಕೆಟ್ ಹಾಗೂ ಓಲಿ ರಾಬಿನ್ಸನ್ 2 ವಿಕೆಟ್ ಪಡೆಯುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದನ್ನೂ ಓದಿ: ಯುವರಾಜ್ ಸಿಂಗ್ಗೆ 41ರ ಜನ್ಮದಿನದ ಸಂಭ್ರಮ.. ಯುವಿ ಆಟ ನೆನೆದು ಟ್ವೀಟ್ ಮಾಡಿದ ಬಿಸಿಸಿಐ