ಅಹಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರಿಂದ ಟೀಮ್ ಇಂಡಿಯಾ ಕ್ಯಾಪ್ ಪಡೆದುಕೊಂಡ ಆಲ್ ರೌಂಡರ್ ದೀಪಕ್ ಹೂಡ ತಮ್ಮ ಬಾಲ್ಯದ ಕನಸು ನನಸಾಯಿತು ಎಂದು ಹೇಳಿಕೊಂಡಿದ್ದಾರೆ.
ದೀಪಕ್ ಹೂಡ ಅವರಿಗೆ ಭಾರತ ತಂಡದ ಪರ ಆಡುವುದು ಮತ್ತು ಎಂಎಸ್ ಧೋನಿ ಅಥವಾ ವಿರಾಟ್ ಕೊಹ್ಲಿ ಅವರಿಂದ ಪದಾರ್ಪಣೆ ಕ್ಯಾಪ್ ಪಡೆಯುವುದು ತಮ್ಮ ಬಾಲ್ಯದ ಕನಸಾಗಿತ್ತು ಎಂದು ಹೇಳಿಕೊಂಡಿದ್ದಾರೆ.
ಬರೋಡ ಆಲ್ರೌಂಡರ್ ವೆಸ್ಟ್ ಇಂಡೀಸ್ ವಿರುದ್ಧ 44 ರನ್ಗಳಿಂದ ಗೆದ್ದ ನಂತರ ಸೂರ್ಯಕುಮಾರ್ ಯಾದವ್ ಜೊತೆ ಬಿಸಿಸಿಐ ಟಿವಿಯಲ್ಲಿ ಮಾತನಾಡುವ ವೇಳೆ, ನಾನು ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದೆ. ಅದೊಂದು ಅದ್ಭುತವಾದ ಭಾವನೆ ಮತ್ತು ಈ ತಂಡದ ಭಾಗವಾಗಿರುವುದು ದೊಡ್ಡ ಗೌರವವಾಗಿದೆ" ಎಂದು ಹೇಳಿದರು.
" ನಾನು ಮೊದಲು ಭಾರತ ತಂಡಕ್ಕೆ ಬಂದಾಗ ವಿರಾಟ್ ಭಾಯ್ ಇರಲಿಲ್ಲ, ಆದರೆ, ಅವರು ಲೆಜೆಂಡ್ ಆಗಿ ಬೆಳೆಯುತ್ತಿರುವುದನ್ನ ನಾನು ನೋಡಿದ್ದೇನೆ. ಲೆಜೆಂಡರಿ ಮಹಿ ಭಾಯ್ ಅಥವಾ ಕೊಹ್ಲಿ, ಈ ಇಬ್ಬರಲ್ಲಿ ಯಾರಿಂದಲಾದರೂ ಭಾರತದ ಕ್ಯಾಪ್ ಪಡೆಯುವುದು ಬಾಲ್ಯದ ಕನಸಾಗಿತ್ತು. ಕೊಹ್ಲಿಯಿಂದ ಕ್ಯಾಪ್ ಪಡೆದಿರುವುದು ಅದ್ಭುತವಾಗಿದೆ" ಎಂದು ಹೂಡ ತಮ್ಮ ಸಂತಸ ಹಂಚಿಕೊಂಡರು.
2017 ಶ್ರೀಲಂಕಾ ಪ್ರವಾಸದಲ್ಲಿ ಹೂಡ ಭಾರತ ಟಿ-20 ತಂಡಕ್ಕೆ ಆಯ್ಕೆಯಾಗಿದ್ದರು, ಆದರೆ, ಆಡುವ 11ರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದೇ ಪ್ರವಾಸದಲ್ಲಿ ವಾಷಿಂಗ್ಟನ್ ಸುಂದರ್ ಕೂಡ ಅವಕಾಶ ಪಡೆದುಕೊಂಡಿದ್ದರು.
ರಾಷ್ಟ್ರೀಯ ತಂಡಕ್ಕೆ ಬರಲು ನಿಮ್ಮ ಪ್ರೇರಣೆ ಏನು ಎಂದು ಕೇಳಿದಾಗ " ನಾನು ಗುರಿಯಿಂದ ವಿಚಲನಗೊಳ್ಳದೆ ಪ್ರಕ್ರಿಯೆಯತ್ತ ಗಮನ ಹರಿಸಿದ್ದೇನೆ. ಒಳ್ಳೆಯ ವಿಷಯಗಳಿಗೆ ಸಮಯ ತೆಗೆದುಕೊಳ್ಳುತ್ತದೆ, ಆದರೆ, ಸದಾ ನೀವು ಸಿದ್ಧರಾಗಿರಬೇಕು" ಎಂದರು.
ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಮತ್ತು ಕೊಹ್ಲಿಯಿಂದ ಸಾಕಷ್ಟು ಕಲಿಯಲು ಬಯಸುತ್ತೇನೆ. ಅವರ ಜೊತೆ ಡ್ರೆಸಿಂಗ್ ರೂಮ್ ಹಂಚಿಕೊಳ್ಳುವ ಭಾವನೆಯ ಬೇರೆ, ಅವರಿಂದ ಕಲಿಯುವುದು ಬಹಳಷ್ಟಿದೆ. ನಾನು ಅದರ ಕಡೆ ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದದ್ದು ನನ್ನ ನಿರ್ಧಾರಗಳಿಂದ, ಕ್ರೆಡಿಟ್ ಬೇರೆಯವರು ತೆಗೆದುಕೊಂಡಿದ್ದಾರೆ: ರಹಾನೆ ಕಿಡಿ