ಕೊಲಂಬೊ: ಶ್ರೀಲಂಕಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 3 ವಿಕೆಟ್ಗಳ ರೋಚಕ ಗೆಲುವು ದಾಖಲಿಸಿದೆ. ಈ ಪಂದ್ಯದ ಗೆಲುವಿನ ಶ್ರೇಯ ಕೋಚ್ ರಾಹುಲ್ ದ್ರಾವಿಡ್ ಅವರಿಗೂ ಸಲ್ಲುತ್ತದೆ. ತಂಡ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದ ಸಂದರ್ಭದಲ್ಲಿ ಮೈದಾನದಲ್ಲಿದ್ದ ದೀಪಕ್ ಚಹರ್ಗೆ ರಕ್ಷಣಾತ್ಮಕ ಆಟದ ಮೊರೆ ಹೋಗುವಂತೆ ಅವರು ಸೂಚನೆ ನೀಡಿದ್ದರು. ಅದರ ಫಲವಾಗಿ ತಂಡ ಗೆಲುವು ಸಾಧಿಸುವಂತಾಯಿತು.
ಇದೇ ವಿಚಾರವಾಗಿ ಮಾತನಾಡಿರುವ ಆಲ್ರೌಂಡರ್ ದೀಪಕ್ ಚಹರ್, ರಾಹುಲ್ ದ್ರಾವಿಡ್ ಕೇವಲ 'ಇಂದಿರಾನಗರದ ಗೂಂಡಾ ಮಾತ್ರವಲ್ಲ. ಸಂಪೂರ್ಣ ಭಾರತದ ಗೂಂಡಾ' ಎಂದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಂಡಿದ್ದ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಅವರ ನಟನೆಯ ಜಾಹೀರಾತುವೊಂದು ಸಂಚಲನ ಸೃಷ್ಟಿಸಿತ್ತು. ಅದರಲ್ಲಿ 'ಇಂದಿರಾ ನಗರ್ ಕಾ ಗೂಂಡಾ ಹೂ ಮೈ 'ಹೊಡೆದುಹಾಕಿ ಬಿಡ್ತೀನಿ' ಎಂಬ ಡೈಲಾಗ್‌ಗಳು ವೈರಲ್ ಆಗಿದ್ದವು. ಜತೆಗೆ ಕಾರಿನ ಗ್ಲಾಸ್ ಒಡೆದು ಹಾಕಿ ತಮ್ಮ ಆಕ್ರೋಶ ಹೊರಹಾಕಿದ್ದರು. ಇದಾದ ಬಳಿಕ ರಾಹುಲ್ ದ್ರಾವಿಡ್ಗೆ ಅನೇಕರು 'ಇಂದಿರಾನಗರದ ಗೂಂಡಾ' ಎಂದು ತಮಾಷೆಯಾಗಿ ಕರೆಯಲು ಶುರು ಮಾಡಿದ್ದರು.
ಇದನ್ನೂ ಓದಿ: ಹಲ್ಚಲ್ ಸೃಷ್ಟಿಸಿದ ಜ್ಯಾಮಿ ಜಾಹೀರಾತು.. ವಾಲ್‌ನಂಥ ದೃಢ ಮನಸ್ಸಿನ ದ್ರಾವಿಡ್ ಗೂಂಡಾಗಿರಿಗೆ ಫಿದಾ!
ಸದ್ಯ ಟೀಂ ಇಂಡಿಯಾ ತಂಡದ(ಶ್ರೀಲಂಕಾ ಪ್ರವಾಸ) ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ರಾಹುಲ್ ದ್ರಾವಿಡ್ ಎಲ್ಲರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇದೇ ವಿಚಾರವಾಗಿ ದೀಪಕ್ ಚಹರ್ ಕೂಡ ಮಾತನಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ರಾಹುಲ್ ದ್ರಾವಿಡ್ ಸರ್, ಕೇವಲ ಇಂದಿರಾನಗರದ ಗೂಂಡಾ ಅಲ್ಲ, ಬದಲಾಗಿ ಸಂಪೂರ್ಣ ಭಾರತದ ಗೂಂಡಾ ಆಗಿದ್ದಾರೆ. ತಂಡದೊಂದಿಗೆ ಅವರು ಉತ್ತಮ ಸಂಬಂಧ ಹೊಂದಿದ್ದು, ಆಟಗಾರರಿಗೆ ಎಲ್ಲ ರೀತಿಯಿಂದಲೂ ಮಹತ್ವದ ಸಲಹೆ ನೀಡುತ್ತಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.