ಚೆನ್ನೈ: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನಿನ್ನೆ 40ನೇ ವಸಂತಕ್ಕೆ ಕಾಲಿಟ್ಟಿದ್ದು, ಕ್ರಿಕೆಟ್ ದಿಗ್ಗಜರು, ರಾಜಕಾರಣಿಗಳು ಅವರಿಗೆ ಶುಭ ಕೋರಿದ್ದಾರೆ. ಈ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಧೋನಿ ಅಭಿಮಾನಿಗಳಿಗೆ ಶುಭ ಸುದ್ದಿ ತಿಳಿಸಿದೆ.
ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯಗೊಳ್ತಿದ್ದಂತೆ ಮುಂದಿನ ವರ್ಷದ ಐಪಿಎಲ್ಗೋಸ್ಕರ ಎಲ್ಲವೂ ಬದಲಾಗಲಿದೆ. ಎಲ್ಲ ಫ್ರಾಂಚೈಸಿಗಳು ಕೇವಲ ನಾಲ್ವರು ಆಟಗಾರರಿಗೆ ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್, ಧೋನಿ ಅವರಿಗೆ ಕೈಬಿಡಲಿದೆ ಎಂಬ ಮಾತು ಕೇಳಿ ಬರಲು ಶುರುವಾಗಿವೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್ ಸ್ಪಷ್ಟನೆ ನೀಡಿದ್ದಾರೆ.
ಎಂ.ಎಸ್ ಧೋನಿ ಮುಂದಿನ 1 ಅಥವಾ 2 ವರ್ಷಗಳ ಕಾಲ ಮುಂದುವರೆಯಲಿದ್ದು, ಅವರು ನಿವೃತ್ತಿ ಪಡೆದುಕೊಳ್ಳಲು ಯಾವುದೇ ಕಾರಣವಿಲ್ಲ. ನಾಯಕತ್ವದಲ್ಲಿ ಹಾಗೂ ಬ್ಯಾಟ್ಸ್‌ಮನ್ ಆಗಿ ನಮ್ಮ ತಂಡದಲ್ಲಿ ಮುಂದುವರೆಯಲಿದ್ದಾರೆ ಎಂದು ತಿಳಿಸಿದ್ದಾರೆ.
2021ರ ಐಪಿಎಲ್ ಮುಕ್ತಾಯವಾಗುತ್ತಿದ್ದಂತೆ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ನಿಂದಲೂ ಹೊರಗುಳಿಯಲಿದ್ದಾರೆ ಎಂಬ ಮಾತು ಜೋರಾಗಿ ಕೇಳಲು ಶುರುವಾಗಿದ್ದವು. ಜತೆಗೆ ಮುಂದಿನ ವರ್ಷದ ಐಪಿಎಲ್ಗೋಸ್ಕರ ದೊಡ್ಡ ಮಟ್ಟದ ಹರಾಜು ಪ್ರಕ್ರಿಯೆ ನಡೆಯಲಿದ್ದು, ಚೆನ್ನೈ ಬೇರೆ ಆಟಗಾರರನ್ನ ಉಳಿಸಿಕೊಂಡು ಧೋನಿಗೆ ಕೈಬಿಡಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಎಲ್ಲದಕ್ಕೂ ಖುದ್ದಾಗಿ ಫ್ರಾಂಚೈಸಿ ಉತ್ತರ ನೀಡಿದೆ.
ಇದನ್ನೂ ಓದಿರಿ: SL vs IND: ಸರಣಿ ಆಯೋಜನೆಯಿಂದ ಶ್ರೀಲಂಕಾಗೆ 89.7 ಕೋಟಿ ರೂ. ಆದಾಯ
ಕಳೆದ ಕೆಲ ದಿನಗಳ ಹಿಂದೆ ಇದೇ ವಿಚಾರವಾಗಿ ಮಾತನಾಡಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರಾಡ್ ಹಾಗ್ 'ಧೋನಿ ಫ್ರಾಂಚೈಸಿಗಳ ಮಹಾರಾಜ, ಯಾವುದೇ ಕಾರಣಕ್ಕೂ ಸಿಎಸ್ಕೆ ಫ್ರಾಂಚೈಸಿ ಅವರನ್ನು ಕೈಬಿಡಲ್ಲ ಎಂದಿದ್ದರು.