ಬಾಂಗ್ಲಾದೇಶ: ಶಫಾಲಿ ವರ್ಮಾ ಅವರ 42 ರನ್‌ಗಳ ಭರ್ಜರಿ ಬ್ಯಾಟಿಂಗ್ ಮತ್ತು ದೀಪ್ತಿ ಶರ್ಮಾ ಅವರ ಮೂರು ವಿಕೆಟ್‌ಗಳ ನೆರವಿನಿಂದ ಭಾರತ ವನಿತೆಯರ ಕ್ರಿಕೆಟ್ ತಂಡ ಇಂದು ನಡೆದ ಥಾಯ್ಲೆಂಡ್ ವಿರುದ್ಧದ ಹಣಾಹಣಿಯಲ್ಲಿ 74 ರನ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ ಏಷ್ಯಾ ಕಪ್‌ನಲ್ಲಿ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಸಿಲ್ಹೆಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2022ರ ಮಹಿಳಾ ಏಷ್ಯಾ ಕಪ್‌ನಲ್ಲಿ ಈ ಬಾರಿಯ ಟೂರ್ನಮೆಂಟ್ ಉದ್ದಕ್ಕೂ ಉತ್ತಮ ಪ್ರದರ್ಶನ ತೋರಿದ್ದ ಥಾಯ್ಲೆಂಡ್ ವನಿತೆಯರು ಸತತ ಎರಡು ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಪಂದ್ಯ ಗೆಲ್ಲುವುದರ ಜೊತೆಗೆ ಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡಿರುವ ಭಾರತದ ವನಿತೆಯರು ಶನಿವಾರದಂದು ಶ್ರೀಲಂಕಾ ವಿರುದ್ಧ ಸೆಣಸಲಿದ್ದಾರೆ.
ಇಂದು ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ ತಂಡ ಕೇವಲ ರನ್ನಿಂದ ರೋಚಕವಾಗಿ ಗೆದ್ದಿದ್ದು, ಫೈನಲ್‌ನಲ್ಲಿ ಭಾರತವನ್ನು ಎದುರಿಸಲಿದೆ. ಇನ್ನು 6 ಬಾರಿಯ ಚಾಂಪಿಯನ್ ಆದ ಭಾರತ ತಂಡವನ್ನು ದ್ವೀಪರಾಷ್ಟ್ರದ ವನಿತೆಯರು ಶನಿವಾರ ಸವಾಲು ನೀಡಲು ಸಿದ್ಧರಾಗಿದ್ದಾರೆ.
ಸತತ 8ನೇ ಬಾರಿಗೆ ಫೈನಲ್‌ಗೆ ಅರ್ಹತೆ ಪಡೆಯುವ ಮೂಲಕ ಮಹಿಳಾ ಏಷ್ಯಾಕಪ್ ಇತಿಹಾಸದಲ್ಲಿ ಭಾರತದ ವನಿತೆಯರು ಇತಿಹಾಸ ಬರೆದರು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 148 ರನ್ ಗಳಿಸುವಲ್ಲಿ ಶಕ್ತವಾಯ್ತು. ಈ ಗುರಿ ಬೆನ್ನತ್ತಿದ ಥಾಯ್ಲೆಂಡ್ ತಂಡವನ್ನು ಭಾರತ ಕೇವಲ 74 ರನ್‌ಗಳಿಗೆ ಕಟ್ಟಿ ಹಾಕಿತು. ಲೀಗ್ ಹಂತದ ಪಂದ್ಯಕ್ಕಿಂತ ತುಸು ಎಚ್ಚರಿಕೆಯಿಂದ ಆಡಿದ ಥಾಯ್ಲೆಂಡ್ ವನಿತೆಯರು 9 ವಿಕೆಟ್ ಕಳೆದುಕೊಂಡು 74 ರನ್ ಗಳಿಸಿದರು. ಥಾಯ್ಲೆಂಡ್ ಪರ ನರುಮೊಲ್ ಚೈವಾಯ್ ಮತ್ತು ನಟ್ಟಯಾ ಬೂಚತಮ್ ಇಬ್ಬರೂ ಕ್ರಮವಾಗಿ 21 ರನ್ ಗಳಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಪ್ರದರ್ಶನಕ್ಕೆ ಇಳಿದ ಭಾರತದ ತಂಡ 6 ವಿಕೆಟ್ ಕಳೆದುಕೊಡು 148 ರನ್ ಮಾಡಿತು. ಭಾರತದ ಪರ ಶಫಾಲಿ ವರ್ಮಾ 42 ರನ್ ಗಳಿಸಿದರೆ ನಾಯಕಿ ಹರ್ಮನ್‌ಪ್ರೀತ್ ಕೌರ್ 36 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ನೆರವಾದರು. ಉಳಿದಂತೆ ನಿಧಾನಗತಿಯಲ್ಲಿ ಬ್ಯಾಟ್ ಮಾಡಿದ ಜೆಮಿಮಾ ಕೂಡ 27 ರನ್ ಗಳಿಸಿದರು.
ಇನ್ನು ಭಾರತದ ಪರ ದೀಪ್ತಿ ಶರ್ಮಾ ಮೂರು ಹಾಗೂ ರಾಜೇಶ್ವರಿ ಗಾಯಕ್ವಾಡ್ ಎರಡು ವಿಕೆಟ್ ಪಡೆದರು. ಥಾಯ್ಲೆಂಡ್‌ಗೆ ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿಯೇ ದೀಪ್ತಿ ಶರ್ಮಾ ಥಾಯ್ಲೆಂಡ್ ಆರಂಭಿಕ ಆಟಗಾರ ನನ್ನಪತ್ ಕೊಂಚರೊಯೆಂಕೈ ಅವರನ್ನು ಕೇವಲ 5 ರನ್‌ಗಳಿಗೆ ಔಟ್ ಮಾಡಿ ಗೆಲವಿನ ರೂವಾರಿಯಾದರು.
ಥಾಯ್ಲೆಂಡ್ ಪರ ಸೊರ್ನರಿನ್ ಟಿಪ್ಪೋಚ್ ಮೂರು, ತಿಪಟಚಾ ಪುಟ್ಟವಾಂಗ್, ಫನ್ನಿತಾ ಮಾಯಾ ಮತ್ತು ನಟ್ಟಾಯ ಬೂಚತಮ್ ತಲಾ ಒಂದು ವಿಕೆಟ್ ಪಡೆದರು. ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಆರಂಭಿಕ ಜೋಡಿ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಥಾಯ್ಲೆಂಡ್ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ದಂಡಿಸುವ ಮೂಲಕ ಉತ್ತಮ ಶುಭಾರಂಭ ಮಾಡಿದರು. ಅವರ ಉತ್ತರ ಪ್ರದರ್ಶನದಿಂದ 5 ಓವರ್‌ಗಳಲ್ಲಿ 34 ರನ್ ಗಳಿಸಿದರು. 14 ಎಸೆತಗಳಲ್ಲಿ 13 ರನ್ ಗಳಿಸಿ ಮಂಧಾನ ನಿರ್ಗಮಿಸಿದಾಗ ಬಿರುಸಿನ ಜೊತೆಯಾಟ ಅಂತ್ಯಗೊಂಡಿತು.
ನಂತರ ಬಂದ ಹರ್ಮನ್‌ಪ್ರೀತ್ ಕೌರ್ (36), ರೋಡ್ರಿಗಸ್ (27), ರಿಚಾ ಘೋಷ್ (2), ದೀಪ್ತಿ ಶರ್ಮಾ (3) ಅಲ್ಪ ಮೊತ್ತ ನೀಡುವ ಮೂಲಕ ತಂಡವನ್ನು ಕಟ್ಟುವಲ್ಲಿ ಶ್ರಮ ಹಾಕಿದರು. ಇನಿಂಗ್ಸ್‌ನ ಕೊನೆಯ ಎರಡು ಓವರ್‌ಗಳಲ್ಲಿ ಭಾರತ 16 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.
ಸಂಕ್ಷಿಪ್ತ ಸ್ಕೋರ್: ಭಾರತ 148/6 (ಶಫಾಲಿ ವರ್ಮಾ 42, ಹರ್ಮನ್‌ಪ್ರೀತ್ ಕೌರ್ 36; ಸೊರ್ನಾರಿನ್ ಟಿಪ್ಪೋಚ್ 3-24). ಥಾಯ್ಲೆಂಡ್ 74/9 (ನರುಮೊಲ್ ಚೈವಾಯ್ 21, ನಟ್ಟಾಯ ಬೂಚತಮ್ 21; ದೀಪ್ತಿ ಶರ್ಮಾ 3-7).