ಕ್ವೀನ್ಸ್ಲ್ಯಾಂಡ್: ಆಸ್ಟ್ರೇಲಿಯಾ ಮತ್ತು ಭಾರತ ವನಿತೆಯರ ನಡುವಿನ ಐತಿಹಾಸಿಕ ಅಹರ್ನಿಶಿ ಟೆಸ್ಟ್ ಪಂದ್ಯ ಮೊದಲ ದಿನದಾಟ ಮಳೆ ಕಾರಣದಿಂದ ಅರ್ಧಕ್ಕೆ ಸ್ಥಗಿತಗೊಂಡಿದೆ. ಭಾರತ ವನಿತಾ ತಂಡ 44.1 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 132 ರನ್ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದೆ.
15 ವರ್ಷಗಳ ಬಳಿಕ ಭಾರತ ಮತ್ತು ಆಸ್ಟ್ರೇಲಿಯಾ ದೀರ್ಘ ಮಾದರಿಯ ಕ್ರಿಕೆಟ್ನಲ್ಲಿ ಸ್ಪರ್ಧಿಸುತ್ತಿವೆ. ಅದರಲ್ಲೂ ಭಾರತಕ್ಕಿದು ಪದಾರ್ಪಣೆಯ ಮೊದಲ ಅಹರ್ನಿಶಿ ಟೆಸ್ಟ್ ಪಂದ್ಯ. ಆದರೆ ಐತಿಹಾಸಿಕ ಟೆಸ್ಟ್ ಪಂದ್ಯದ ಮೊದಲ ದಿನ ಕೇವಲ 44 ಓವರ್ಗಳಿಗೆ ಸೀಮಿತಗೊಂಡಿತು.
ಮೊದಲ ಪಿಂಕ್ ಬಾಲ್ ಟೆಸ್ಟ್ನಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನ ತೋರಿದೆ. ಆರಂಭಿಕರಾಗಿ ಕಣಕ್ಕಿಳಿದಿದ್ದ ಶೆಫಾಲಿ ವರ್ಮಾ ಮತ್ತು ಸ್ಮೃತಿ ಮಂದಾನ ಮೊದಲ ವಿಕೆಟ್ಗೆ 93 ರನ್ಗಳ ಜೊತೆಯಾಟ ನೀಡಿದರು. ಶೆಫಾಲಿ ವರ್ಮಾ 64 ಎಸೆತಗಳಲ್ಲಿ 4 ಬೌಂಡರಿಸಹಿತ 31 ರನ್ಗಳಿಸಿ ಔಟಾದರು. ಆದರೆ ಆರಂಭದಿಂದಲೇ ಆಸೀಸ್ ಬೌಲರ್ಗಳನ್ನು ಬೆಂಡೆತ್ತಿದ ಮಂದಾನ 144 ಎಸೆತಗಳಲ್ಲಿ 15 ಬೌಂಡರಿ ಮತ್ತು 1 ಸಿಕ್ಸರ್‌ಸಹಿತ ಅಜೇಯ 80 ರನ್ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ಇವರಿಗೆ ಸಾಥ್ ನೀಡುತ್ತಿರುವ ಪೂನಮ್ ರಾವತ್ ಅಜೇಯ 16 ರನ್ಗಳಿಸಿದ್ದಾರೆ.
ದಾಖಲೆ ಬರೆದ ಮಂದಾನ:
ಇಂದಿನ ಪಂದ್ಯದಲ್ಲಿ ಸ್ಮೃತಿ ಮಂದಾನ ಅಜೇಯ ಅರ್ಧಶತಕ ಸಿಡಿಸುವ ಮೂಲಕ ಆಸೀಸ್ ವಿರುದ್ಧ ಟೆಸ್ಟ್ನಲ್ಲಿ ಗರಿಷ್ಠ ರನ್ ಬಾರಿಸಿದ ಭಾರತದ ಬ್ಯಾಟರ್ ಹಾಗೂ ಅಹರ್ನಿಶಿ ಟೆಸ್ಟ್ನಲ್ಲಿ ಅರ್ಧಶತಕ(70) ಸಿಡಿಸಿದ ಭಾರತದ ಮೊದಲ ಮಹಿಳಾ ಕ್ರಿಕೆಟರ್ ಎನಿಸಿಕೊಂಡರು. ಇದಲ್ಲದೆ ಆಸ್ಟ್ರೇಲಿಯಾ ನೆಲದಲ್ಲಿ ಮೂರು ಮಾದರಿಯಲ್ಲೂ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎಂಬ ಶ್ರೇಯಕ್ಕೂ ಪಾತ್ರರಾದರು. ಅವರು ಟೆಸ್ಟ್ನಲ್ಲಿ 80*, ಏಕದಿನ ಪಂದ್ಯದಲ್ಲಿ 102 ಮತ್ತು ಟಿ20ಯಲ್ಲಿ 66 ರನ್ ಬಾರಿಸಿದ್ದಾರೆ.
ಇದನ್ನೂ ಓದಿ: ಐಪಿಎಲ್ ವೀಕ್ಷಣೆಯಲ್ಲಿ ಭಾರಿ ಏರಿಕೆ: ಮೊದಲ 35 ಪಂದ್ಯ ವೀಕ್ಷಿಸಿದವರ ಸಂಖ್ಯೆ ಎಷ್ಟು ಕೋಟಿ ಗೊತ್ತಾ?