ಮುಂಬೈ: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ 2022ರ ಆವೃತ್ತಿಯಲ್ಲಿ ಹೊಸ ನಾಯಕ ರವೀಂದ್ರ ಜಡೇಜಾ ನೇತೃತ್ವದಲ್ಲಿ ಕಣಕ್ಕಿಳಿದಿತ್ತು. ಮಹೇಂದ್ರ ಸಿಂಗ್ ಧೋನಿ ತಂಡದಲ್ಲಿದ್ದರಿಂದ ಈ ನಿರ್ಣಯ ಸರಿಯಾಗಿದೆ ಎಂದು ಭಾವಿಸಲಾಗಿತ್ತಾದರೂ, ವೀರೇಂದ್ರ ಸೆಹ್ವಾಗ್ ಮಾತ್ರ ಜಡೇಜಾ ಅವರನ್ನು ನಾಯಕನಾಗಿ ಆಯ್ಕೆ ಮಾಡಿದ್ದು ಮ್ಯಾನೇಜ್ಮೆಂಟ್ ಮಾಡಿದ ಮೊದಲ ತಪ್ಪು ಎಂದು ಭಾವಿಸಿದ್ದಾರೆ.
ಪ್ರತಿ ಆವೃತ್ತಿಯ ಕೊನೆಯಲ್ಲಿ ಕ್ರಿಕೆಟ್ ಅಭಿಮಾನಿಗಳು, ಕ್ರಿಕೆಟ್ ಪಂಡಿತರು ಇದು ಧೋನಿ ಅವರ ಕೊನೆ ಐಪಿಎಲ್ ಆಗಿರಬಹುದು ಎಂದು ಚರ್ಚೆ ಮಾಡುತ್ತಿರುತ್ತಾರೆ. ಆದರೆ, 40 ವರ್ಷದ ಧೋನಿ 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರೂ ಹಳದಿ ಜರ್ಸಿಯಲ್ಲಿ ಆಡುವುದನ್ನು ಮುಂದುವರಿಸಿದ್ದಾರೆ. ಧೋನಿ ನಂತರ ಜಡೇಜಾರನ್ನು ನಾಯಕನಾಗಿ ನೇಮಿಸಿದ ಫ್ರಾಂಚೈಸಿ ನಿರ್ಧಾರ ಶ್ಲಾಘನೆಗೆ ಒಳಗಾಗಿತ್ತು.
2022ರ ಮಧ್ಯದಲ್ಲಿ ಧೋನಿ ಮತ್ತೆ ನಾಯಕನಾಗಿ ಮರು ನೇಮಕವಾಗಿದ್ದಾರೆ. ಜಡೇಜಾ ಸತತ ಸೋಲುಗಳಿಂದ ಬಳಲಿ ತಂಡ ಪ್ಲೇ ಆಫ್ ರೇಸ್ನಿಂದ ಹೊರ ಬೀಳುವ ಹಂತಕ್ಕೆ ತಲುಪಿದ ಬೆನ್ನಲ್ಲೇ , ಜಡೇಜಾ ನಾಯಕತ್ವದ ಒತ್ತಡ ತಮ್ಮ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ನಾಯಕತ್ವ ತ್ಯಜಿಸಿದರು. ಈ ಕುರಿತು ಮಾತನಾಡಿರುವ ಸೆಹ್ವಾಗ್, ಧೋನಿ ಮೊದಲಿನಿಂದಲೂ ನಾಯಕನಾಗಿದ್ದರೆ ಸಿಎಸ್ಕೆಗೆ ಈ ಪರಿಸ್ಥಿತಿಗೆ ಬರುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಯಾವುದು ಮೊದಲ ತಪ್ಪು?: "ಧೋನಿ 2022ರ ಆವೃತ್ತಿಯಲ್ಲಿ ನಾಯಕನಾಗುತ್ತಿಲ್ಲ ಎನ್ನುವುದರನ್ನು ಸೀಸನ್ ಆರಂಭಕ್ಕೆ ಸ್ವಲ್ಪ ದಿನಗಳಿರುವಾಗ ಘೋಷಿಸಿದ್ದು, ಸಿಎಸ್ಕೆ ಮಾಡಿದ ಮೊದಲ ತಪ್ಪು. ನಂತರ ರವೀಂದ್ರ ಜಡೇಜಾ ತಂಡದ ನಾಯಕರನ್ನಾಗಿ ಮಾಡಿದ್ದು ದೊಡ್ಡ ತಪ್ಪು. ನಾಯಕನಾಗಿ ಘೋಷಿಸಿದ ಮೇಲೆ ಅವರನ್ನೇ ಟೂರ್ನಿ ಮುಗಿಯುವವರೆಗೂ ಮುಂದುವರಿಯಲು ಬಿಡಬೇಕಿತ್ತು" ಎಂದು ವೀರೂ ಅಭಿಪ್ರಾಯಪಟ್ಟಿದ್ದಾರೆ.
ಜಡೇಜಾ ನಾಯಕತ್ವದಲ್ಲಿ ತಂಡದ ವೈಫಲ್ಯಕ್ಕೆ ಕಾರಣ ತಿಳಿಸಿದ ಅವರು, ತಂಡದಲ್ಲಿ ಖಾಯಂ ಆಗಿ ಆಡುವ 11ರ ಬಳಗವಿರಲಿಲ್ಲ. ಪ್ರತಿ ಪಂದ್ಯದಲ್ಲೂ ತಂಡದಲ್ಲಿ ಬದಲಾವಣೆ ಮಾಡಲಾಗಿದೆ. ಋತುರಾಜ್ ಆರಂಭದಿಂದ ರನ್ಗಳಿಸಲಿಲ್ಲ. ಹಾಗಾಗಿ ಉತ್ತಮ ಆರಂಭ ಪಡೆಯಲು ತಂಡ ವಿಫಲವಾಯಿತು. ಬ್ಯಾಟರ್ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರು. ಒಂದು ವೇಳೆ, ಧೋನಿ ಆರಂಭದಿಂದಲೂ ನಾಯಕನಾಗಿದ್ದರೆ ಸಿಎಸ್ಕೆ ಉತ್ತಮ ಸ್ಥಿತಿಯಲ್ಲಿರುತ್ತಿತ್ತು, ಇಷ್ಟೊಂದು ಪಂದ್ಯಗಳಲ್ಲಿ ಸೋಲು ಕಾಣುತ್ತಿರಲಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.
ಇದನ್ನೂ ಓದಿ:ಕೊಹ್ಲಿ ವಿಕೆಟ್ ಪಡೆಯುವುದು ಎಲ್ಲಾ ಬೌಲರ್ಗಳಿಗೂ ಸುಲಭವಾಗುತ್ತಿರುವುದು ಕಳವಳಕಾರಿ: ಬಿಷಪ್