ಹೈದರಾಬಾದ್: ಅನೇಕ ಏಳು - ಬೀಳುಗಳ ಮಧ್ಯೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಟೀಂ ಇಂಡಿಯಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಕಳೆದ ವರ್ಷ ಯುಎಇನಲ್ಲಿ ನಡೆದ ವಿಶ್ವಕಪ್ ಬಳಿಕ ತಂಡದಿಂದ ಸಂಪೂರ್ಣವಾಗಿ ಸಡ್ಲೈನ್ ಆಗಿದ್ದ ಈ ಪ್ಲೇಯರ್ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದ ಮಾತ್ರ ರೋಚಕ ಕಹಾನಿ. ಅದರ ಬಗ್ಗೆ ಖಾಸಗಿ ಸುದ್ದಿ ವಾಹಿನಿವೊಂದಕ್ಕೆ ಸಂದರ್ಶನ ನೀಡಿ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಕಳೆದ ವರ್ಷ ಯುಎಇಯಲ್ಲಿ ನಡೆದ ಟಿ-20 ವಿಶ್ವಕಪ್ ನಂತರ ಹಾರ್ದಿಕ್ ಪಾಂಡ್ಯ ಸಂಪೂರ್ಣವಾಗಿ ಟೀಂ ಇಂಡಿಯಾದಿಂದ ಸೈಡ್ಲೈನ್ ಆಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, 2022ರ ಐಪಿಎಲ್ನಲ್ಲಿ ಅತ್ಯದ್ಭುತ ಪ್ರದರ್ಶನ ಹಾಗೂ ನಾಯಕತ್ವ ಜವಾಬ್ದಾರಿ ನಿರ್ವಹಿಸಿ, ಗುಜರಾತ್ ತಂಡವನ್ನ ಚಾಂಪಿಯನ್ ಮಾಡಿರುವ ಅವರು, ಇದೀಗ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಪುನರಾಗಮನದ ರೋಚಕ ಕಹಾನಿ: ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಬೇಕು ಎಂಬ ಉದ್ದೇಶದಿಂದಲೇ ಹಾರ್ದಿಕ್ ಪಾಂಡ್ಯ ಸುಮಾರು 4 ತಿಂಗಳ ಕಾಲ ಬೆಳಗ್ಗೆ 5 ಗಂಟೆಗೆ ಎದ್ದು ತರಬೇತಿ ಪಡೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಮಾತನಾಡಿರುವ ಅವರು, ಭಾವನಾತ್ಮಕವಾಗಿ ನಾನು ಚೆನ್ನಾಗಿ ಇದ್ದೆ. ಆದರೆ, ಬಹಳಷ್ಟು ಜನರು ನಮ್ಮನ್ನು ಅನುಮಾನಿಸಿದ್ದಾರೆ. ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ಆಯ್ಕೆಯಾಗುತ್ತಿದ್ದಂತೆ ಅನೇಕರು ಟೀಕೆ ವ್ಯಕ್ತಪಡಿಸಿದ್ದರು. ಅದಕ್ಕೆ ನಾನು ಯಾವತ್ತೂ ಪ್ರತಿಕ್ರಿಯೆ ನೀಡಲು ಮುಂದಾಗಲಿಲ್ಲ ಎಂದರು.
ಇದನ್ನೂ ಓದಿ: ವೆಸ್ಟ್ ಇಂಡೀಸ್ ವಿರುದ್ಧ ಪಾಕ್ ಸಂಘಟಿತ ಪ್ರದರ್ಶನ.. 2ನೇ ಏಕದಿನ ಗೆದ್ದು ಸರಣಿ ಕೈವಶ
ಪ್ರತಿದಿನ ಬೆಳಗ್ಗೆ 5 ಗಂಟೆಗೆ ಎದ್ದು ತರಬೇತಿ ಪಡೆದುಕೊಳ್ಳಲು ಆರಂಭಿಸಿದ್ದೆ. ತಂಡಕ್ಕೆ ಕಮ್ಬ್ಯಾಕ್ ಮಾಡುವ ಉದ್ದೇಶದಿಂದಲೇ ದಿನಾ ರಾತ್ರಿ 9:30ಕ್ಕೆ ಮಲಗಿ ಬಿಡುತ್ತಿದ್ದೆ. ತಂಡದಲ್ಲಿ ಅವಕಾಶ ಪಡೆದುಕೊಳ್ಳುವ ಉದ್ದೇಶದಿಂದಲೇ ಸಾಕಷ್ಟು ತ್ಯಾಗ ಮಾಡಿದ್ದೇನೆ. ಐಪಿಎಲ್ ಆಡುವುದಕ್ಕೂ ಮುಂಚಿತವಾಗಿ ನಾನು ಫಿಟ್ನೆಸ್ ಸಾಬೀತು ಪಡಿಸಬೇಕಾಗಿತ್ತು. ಅದು ದೊಡ್ಡ ಹೋರಾಟವಾಗಿತ್ತು ಎಂದರು.
ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಬಳಿಕ ರಾಷ್ಟ್ರೀಯ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದು ನಿಸ್ಸಂಶಯವಾಗಿ ಖುಷಿ ನೀಡಿದೆ. ದೇಶಕ್ಕಾಗಿ ಆಡುವುದು ಯಾವಾಗಲೂ ವಿಶೇಷವಾಗಿರುತ್ತದೆ. ಸುದೀರ್ಘ ವಿರಾಮದ ಬಳಿಕ ಇದೀಗ ಹೊಸದಾಗಿ ತಂಡಕ್ಕೆ ಮರಳಿದ್ದು, ಮತ್ತಷ್ಟು ಉತ್ಸುಕತೆ ಮೂಡಿಸಿದೆ. ತಂಡಕ್ಕೆ ವಾಪಸ್ ಬರಲು ಏನು ಮಾಡಿದ್ದೇನೆಂಬುದು ತಿಳಿಸಲು ಇದೊಂದು ಉತ್ತಮ ವೇದಿಕೆ ಎಂದರು.