2023ನೇ ವರ್ಷವನ್ನು ವಿಶ್ವಾದ್ಯಂತ ಜನರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಅದರಂತೆ ಈ ವರ್ಷ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡಲು ಅನೇಕ ಟೂರ್ನಿಗಳು ನಡೆಯುತ್ತಿವೆ. 2022ರ ಬಳಿಕ ಅಭಿಮಾನಿಗಳ ಮನರಂಜನೆಗೆ, ನೆಚ್ಚಿನ ತಂಡ ಹಾಗೂ ಆಟಗಾರರ ಹುರಿದುಂಬಿಸಲು ಮಹತ್ವದ ಸರಣಿಗಳು ಆಯೋಜನೆಯಾಗುತ್ತಿವೆ. ಈ ವರ್ಷಪೂರ್ತಿ ಅಭಿಮಾನಿಗಳು ಕ್ರಿಕೆಟ್ ಮೈದಾನದಲ್ಲಿನ ರೋಚಕ ಕ್ಷಣಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ . 2023ರಲ್ಲಿ ನಡೆಯುವ ಪ್ರಮುಖ ಕ್ರಿಕೆಟ್ ಸಮರಗಳ ಮಾಹಿತಿ ಇಲ್ಲಿದೆ.
1. ಬಾರ್ಡರ್-ಗವಾಸ್ಕರ್ ಟ್ರೋಫಿ: ಕಳೆದ ಬಾರಿಯ ಬಾರ್ಡರ್-ಗವಾಸ್ಕರ್ ಕ್ರಿಕೆಟ್ ಟೂರ್ನಿಯು ಭಾರತದ ಪಾಲಾಗಿತ್ತು. ಮೊದಲ ಟೆಸ್ಟ್‌ನಲ್ಲಿ ಸೋಲುಂಡಿದ್ದ ಭಾರತ, ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿಯೂ ಸರಣಿ ಗೆದ್ದಿತ್ತು. ರಹಾನೆ ನೇತೃತ್ವದ ತಂಡವು ಆಸ್ಟ್ರೇಲಿಯಾದಲ್ಲಿ 2-1 ರಿಂದ ಸರಣಿ ಜಯಿಸಿ ಸಂಭ್ರಮಿಸಿತ್ತು. ಈ ಸಲ ಭಾರತಕ್ಕೆ ಕಾಂಗರೂ ಪಡೆ ಆಗಮಿಸಲಿದೆ.
2004ರಿಂದಲೂ ಸಹ ಭಾರತದಲ್ಲಿ ನಡೆದ ಈ ಸರಣಿಯಲ್ಲಿ ಆಸ್ಟ್ರೇಲಿಯಾ ಗೆಲುವು ಕಂಡಿಲ್ಲ. ಇಲ್ಲಿನ ಟರ್ನಿಂಗ್ ಪಿಚ್‌ಗಳು ನಾಥನ್ ಲಿಯಾನ್, ರವಿಚಂದ್ರನ್ ಅವರಂತಹ ಸ್ಪಿನ್ನರ್‌ಗಳಿಗೆ ಸಾಕಷ್ಟು ನೆರವು ನೀಡಲಿವೆ. ಹಾಗೆಯೇ ಸ್ಟಾರ್ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಮಾರ್ನಸ್ ಲ್ಯಾಬುಶೇನ್ ಅವರ ಬ್ಯಾಟಿಂಗ್ ಸವಿಯಬಹುದಾಗಿದೆ. ಅಗ್ರ ಎರಡು ಟೆಸ್ಟ್ ತಂಡಗಳಿಗೆ ಈ ಸರಣಿಯು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಲು ಪ್ರಮುಖವಾಗಿದೆ.
2. ಐಸಿಸಿ ಮಹಿಳಾ ಟಿ20 ವಿಶ್ವಕಪ್: ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ 8ಟನೇ ಆವೃತ್ತಿಯು ಫೆಬ್ರವರಿ 10ರಿಂದ ಆರಂಭವಾಗಲಿದೆ. ದಕ್ಷಿಣ ಆಫ್ರಿಕಾದಲ್ಲಿ ಈ ಟೂರ್ನಿ ನಡೆಯಲಿದೆ. ಮೆಗ್ ಲ್ಯಾನಿಂಗ್, ಬೆತ್ ಮೂನಿ, ತಹ್ಲಿಯಾ ಮೆಕ್‌ಗ್ರಾತ್, ಎಲ್ಲಿಸ್ ಪೆರ್ರಿ, ಅಲಿಸ್ಸಾ ಹೀಲಿ ಮುಂತಾದ ತಾರೆಗಳನ್ನು ಒಳಗೊಂಡ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವು ಆರನೇ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದೆ. ವಿಶೇಷವಾಗಿ ಸ್ಮೃತಿ ಮಂಧಾನಾ, ಹರ್ಮನ್ ಪ್ರೀತ್ ಕೌರ್ ಅವರನ್ನೊಳಗೊಂಡ ಭಾರತ ಹಾಗೂ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಇಂಗ್ಲೆಂಡ್ ತಂಡಗಳು ಟೂರ್ನಿ ಗೆಲ್ಲಬಹುದಾದ ಫೇವರಿಟ್ ತಂಡಗಳಾಗಿವೆ.
3. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್): ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಯು ಅಭಿಮಾನಿಗಳನ್ನು ರಂಜಿಸಲು ಮತ್ತೆ ಬರಲಿದೆ. ಟೂರ್ನಿಯ ದಿನಾಂಕವು ಅಧಿಕೃತವಾಗಿ ಘೋಷಣೆಯಾಗದಿದ್ದರೂ, ಪ್ರತಿವರ್ಷದಂತೆ ಈ ಸಲವೂ ಅಭಿಮಾನಿಗಳನ್ನು ಸೆಳೆಯುವುದರಲ್ಲಿ ಅನುಮಾನವಿಲ್ಲ.
ಪ್ರಮುಖವಾಗಿ ಈ ಸಲದ ಐಪಿಎಲ್ ಮಿನಿ ಹರಾಜಿನಲ್ಲಿ ಇಂಗ್ಲೆಂಡ್‌ನ ಸ್ಯಾಮ್ ಕರನ್ ಪಂಜಾಬ್ ಕಿಂಗ್ಸ್‌ಗೆ 18.5 ಕೋಟಿ ರೂಪಾಯಿ, ಬೆನ್ ಸ್ಟೋಕ್ಸ್ 16.25 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು 17.5 ಕೋಟಿ ರೂಪಾಯಿಗೆ ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡಿದ್ದಾರೆ. ಕಳೆದ ಬಾರಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಚಾಂಪಿಯನ್ ಪಟ್ಟ ಗೆದ್ದಿತ್ತು
4. ಮಹಿಳಾ ಐಪಿಎಲ್: ಪ್ರಮುಖ ಈ ಬಾರಿ ಮಹಿಳಾ ಐಪಿಎಲ್ ಟೂರ್ನಿಯೂ ಸಹ ನಡೆಯಲಿದೆ ಎಂದು ಈ ಹಿಂದೆಯೇ ಬಿಸಿಸಿಐ ದೃಢಪಡಿಸಿದೆ. ಅಂತಾರಾಷ್ಟ್ರೀಯ ಆಟಗಾರ್ತಿಯರನ್ನೊಳಗೊಂಡು ಈ ಟೂರ್ನಿ ನಡೆಸುವ ಸಾಧ್ಯತೆ ಇದೆ. ಪಂದ್ಯಾವಳಿಯ ಚೊಚ್ಚಲ ಆವೃತ್ತಿಯು ಮಹಿಳಾ ಕ್ರಿಕೆಟ್ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರಾಮುಖ್ಯತೆ ಪಡೆದಿದೆ. ಆದರೆ ಈ ಕ್ರಿಕೆಟ್ ಸಮರದ ದಿನಾಂಕವು ಇನ್ನಷ್ಟೇ ಪ್ರಕಟವಾಗಬೇಕಿದೆ.
5. ಆಶಸ್: ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಅತಿದೊಡ್ಡ ಕ್ರಿಕೆಟ್ ಸಮರ ಎಂದೇ ಕರೆಯಲಾಗುವ ಆಶಸ್ ಸರಣಿ ಕೂಡ 2023ರಲ್ಲಿ ಪುನರಾಗಮಿಸಲಿದೆ. ರೋಚಕ ಕ್ರಿಕೆಟ್, ಸ್ಲೆಡ್ಜಿಂಗ್ ಮತ್ತು ಪೈಪೋಟಿ ನಿರೀಕ್ಷೆ ಎಲ್ಲ ಕ್ರಿಕೆಟ್ ಅಭಿಮಾನಿಗಳದ್ದಾಗಿದೆ. ಈ ಸಲ ಇಂಗ್ಲೆಂಡ್ನಲ್ಲಿ ಆಶಸ್ ಸರಣಿಯು ಜೂನ್ 16ರಿಂದ ಜುಲೈ 31ರವರೆಗೆ ನಡೆಯಲಿದೆ.
ಇದನ್ನೂ ಓದಿ: ಆಸ್ಟ್ರೇಲಿಯಾ ಟೆಸ್ಟ್ ಸರಣಿಯಿಂದ ಗಾಯಾಳು ರಿಷಬ್ ಪಂತ್ ಔಟ್?: ರೇಸ್ನಲ್ಲಿ ಉಪೇಂದ್ರ, ಭರತ್
6. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಟೆಸ್ಟ್ ಕ್ರಿಕೆಟ್‌ನ ಚಾಂಪಿಯನ್ ನಿರ್ಧರಿಸುವ ಫೈನಲ್ ಪಂದ್ಯವು ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ಜೂನ್ 6ರಿಂದ 11ರರೆಗೆ ನಡೆಯಲಿದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಭಾರತ ಮತ್ತು ಶ್ರೀಲಂಕಾ ತಂಡಗಳು ಅಂತಿಮ ಹಣಾಹಣಿ ಆಡುವ ಪೈಪೋಟಿಯಲ್ಲಿವೆ. ಫೈನಲ್ ಪಂದ್ಯಕ್ಕೆ ಯಾವ ತಂಡ ಅರ್ಹತೆ ಪಡೆಯಲಿದೆ ಎಂಬುದನ್ನು ಇನ್ನೂ ಕಾದುನೋಡಬೇಕಿದೆ.
7. ಏಷ್ಯಾ ಕಪ್: 2023ರ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆಯಲಿದೆ. ಕಳೆದ ವರ್ಷ ಈ ಹಿಂದಿನ ಆವೃತ್ತಿಯಲ್ಲಿ ಭಾರತವು ವೈಫಲ್ಯ ಅನುಭವಿಸಿತ್ತು. ಆದರೆ ಈ ಬಾರಿಯ ಏಷ್ಯಾಕಪ್ ಪಾಕಿಸ್ತಾನದಲ್ಲಿ ನಡೆಯಲಿದೆ ಎಂದು ತೀರ್ಮಾನವಾಗಿದ್ದು, ಅಲ್ಲಿಯೇ ನಡೆಯಲಿದೆಯಾ? ಯಾವ ತಂಡಗಳೆಲ್ಲ ಭಾಗವಹಿಸಲಿವೆ ಎಂಬುದು ಇನ್ನೂ ದೃಢವಾಗಿಲ್ಲ.
8. ಐಸಿಸಿ ಕ್ರಿಕೆಟ್ ವಿಶ್ವಕಪ್: ಕ್ರಿಕೆಟ್‌ನಲ್ಲಿ ಮೆಗಾ ಈವೆಂಟ್ ಆಗಿರುವ ವಿಶ್ವಕಪ್ ಟೂರ್ನಿಯು 2023ರ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ನಡೆಯಲಿದೆ. ಈ ಮಹಾಸಮರವು ಭಾರತದಲ್ಲೇ ನಡೆಯಲಿದೆ ಎಂಬುದು ವಿಶೇಷವಾಗಿದೆ. 1987, 1996 ಮತ್ತು 2011ರ ಟೂರ್ನಿಗಳ ಆತಿಥ್ಯ ವಹಿಸಿದ್ದ ಭಾರತ ಮತ್ತೊಮ್ಮೆ ಆಯೋಜನೆ ಮಾಡಲಿದೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಮೂರನೇ ಬಾರಿಗೆ ಕ್ರಿಕೆಟ್‌ನ ಅತಿದೊಡ್ಡ ಪ್ರಶಸ್ತಿಯನ್ನು ಗೆಲ್ಲುವತ್ತ ಅಖಾಡಕ್ಕಿಳಿಯಲಿದೆ.
ಇದನ್ನೂ ಓದಿ: ಟಿ20ಗೆ ಸೂರ್ಯ, ಏಕದಿನದಲ್ಲಿ ಅಯ್ಯರ್, ಟೆಸ್ಟ್‌ನಲ್ಲಿ ಪಂತ್: ಕಳೆದ ವರ್ಷದ ಬೆಸ್ಟ್ ಕ್ರಿಕೆಟರ್ಸ್!