ಚೆನ್ನೈ: ಆಸ್ಟ್ರೇಲಿಯಾ ವಿರುದ್ಧದ ಭಾರತ ಏಕದಿನ ವಿಶ್ವಕಪ್ನ ಮೊದಲ ಪಂದ್ಯವನ್ನು ನಾಳೆ ಚೆಪಾಕ್ ಕ್ರೀಡಾಂಗಣದಲ್ಲಿ ಆಡಲಿದೆ. ಪಂದ್ಯಕ್ಕೂ ಮೊದಲು ಯುವ ಆಟಗಾರ, ಅದ್ಭುತ ಲಯದಲ್ಲಿರುವ ಶುಭ್ಮನ್ ಗಿಲ್ ಜ್ವರದಿಂದ ಬಳಲುತ್ತಿರುವುದು ತಂಡವನ್ನು ಚಿಂತೆಗೀಡು ಮಾಡಿದೆ. ಹೀಗಾಗಿ ನಾಳಿನ ಪಂದ್ಯದಲ್ಲಿ ಗಿಲ್ ಆಡುತ್ತಾರಾ ಇಲ್ಲವಾ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲವಾದರೂ, ನಾಯಕ ರೋಹಿತ್ ಶರ್ಮಾ ಅವರು ಈ ಬಗ್ಗೆ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ್ದಾರೆ.
ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೂ ಮೊದಲು ಗಿಲ್ ಗಾಯಗೊಂಡಿಲ್ಲ, ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅಷ್ಟೇ. ಈಗಲೇ ಆತನನ್ನು ಪಂದ್ಯದಿಂದ ಹೊರಗಿಟ್ಟಿಲ್ಲ. ಪೂರ್ಣ ಚೇತರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ವೈದ್ಯರ ತಂಡವು ಅವರ ಮೇಲೆ ನಿಗಾ ವಹಿಸಿದೆ. ಹೀಗಾಗಿ ಅವರು ತಂಡದಿಂದ ಹೊರಗುಳಿದಿಲ್ಲ ಎಂದು ನಾಯಕ ರೋಹಿತ್ ಶರ್ಮಾ ತಿಳಿಸಿದರು.
ಜ್ವರದ ಮಧ್ಯೆಯೇ ಆತ ಪಂದ್ಯ ಆಡಬೇಕೆಂದು ನಾನು ಬಯಸುತ್ತಿಲ್ಲ. ಪೂರ್ಣ ಗುಣಮುಖನಾಗಲಿ. ಗಿಲ್ ಯುವಕ, ಫಿಟ್ ದೇಹವನ್ನು ಹೊಂದಿದ್ದಾರೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿದ್ದಾರೆ ಎಂದು ರೋಹಿತ್ ಅಭಿಪ್ರಾಯಪಟ್ಟರು.
ಗಿಲ್ ಡೆಂಗ್ಯೂ ಜ್ವರಕ್ಕೆ ತುತ್ತಾಗಿದ್ದು, ಈಚೆಗಷ್ಟೇ ಅವರಿಗೆ ಪಾಸಿವಿಟ್ ವರದಿ ಬಂದಿತ್ತು. ಇದರಿಂದಾಗಿ ಅವರು ಕಳೆದ ಎರಡು ದಿನಗಳಿಂದ ತಂಡದೊಂದಿಗೆ ಅಭ್ಯಾಸ ನಡೆಸಿಲ್ಲ. ಒಂದು ವೇಳೆ ಗಿಲ್ ಅಲಭ್ಯರಾದಲ್ಲಿ ಎಡಗೈ ಬ್ಯಾಟರ್ ಇಶಾನ್ ಕಿಶನ್, ರೋಹಿತ್ ಜೊತೆ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಇದರ ಜೊತೆಗೆ ಸ್ಫೋಟಕ ಆಟಗಾರ ಸೂರ್ಯಕುಮಾರ್ ಯಾದವ್ ಕೂಡ ಸ್ಥಾನ ಪಡೆಯಲೂಬಹುದು.
ರಾಹುಲ್ ದ್ರಾವಿಡ್ ಹೇಳಿದ್ದಿಷ್ಟು: ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಈ ಬಗ್ಗೆ ಮಾತನಾಡಿದ್ದು, ಆಟದ ದಿನದಂದು ಕೊನೆಯ ನಿಮಿಷದಲ್ಲಿ ಗಿಲ್ ತಂಡ ಸೇರಿಕೊಂಡರೂ ಅಚ್ಚರಿಯಿಲ್ಲ ಎಂದು ಹೇಳಿದ್ದರು. ಪಾಕಿಸ್ತಾನದ ಎದುರಿನ ಮಹತ್ವದ ಪಂದ್ಯಕ್ಕೂ ಮೊದಲು ಆರಂಭಿಕ ಸ್ಥಾನವನ್ನು ಪರೀಕ್ಷೆಗೆ ಒಳಪಡಿಸುವ ಬಗ್ಗೆ ಅವರು ಒಲವು ಹೊಂದಿಲ್ಲ ಎಂಬುದನ್ನು ತಿಳಿಸಿದ್ದರು.
ಮೂವರು ಸ್ಪಿನ್ನರ್ಸ್ಸ ಆಡ್ತಾರಾ?: ಸ್ಪಿನ್ ಸ್ನೇಹಿ ಪಿಚ್ ಆಗಿರುವ ಚೆಪಾಕ್ ಕ್ರೀಡಾಂಗಣದಲ್ಲಿ ಮೂವರು ತಜ್ಞ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ಬಗ್ಗೆಯೂ ತಂಡ ಯೋಜಿಸಿದೆ. ನಾಯಕ ರೋಹಿತ್ ಶರ್ಮಾ ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮೂವರು ಸ್ಪಿನ್ನರ್‌ಗಳನ್ನು ಆಡಿಸಲೂ ಹಿಂಜರಿಯುವುದಿಲ್ಲ ಎಂದಿದ್ದರು. ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಅವರಿಗೆ ಆಡುವ 11ರಲ್ಲಿ ಸ್ಥಾನವನ್ನು ನೀಡಬಹುದಾಗಿದೆ. ಹಾರ್ದಿಕ್ ಪಾಂಡ್ಯ ಸೇರಿ ಆರು ಬೌಲರ್ಗಳಿಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ.
ಅಕ್ಷರ್ ಪಟೇಲ್ ಗಾಯಗೊಂಡಿದ್ದರಿಂದ ಸ್ಥಾನ ಪಡೆದಿರುವ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ವಿಶ್ವಕಪ್‌ನಲ್ಲಿ ಸಾಮರ್ಥ್ಯ ಸಾಬೀತು ಮಾಡಬೇಕಿದೆ. ಬಹುಶಃ ಇದು ತಮ್ಮ ಕೊನೆಯ ವಿಶ್ವಕಪ್ ಆಗಿದೆ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದ ಆಫ್ ಸ್ಪಿನ್ನರ್, ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವುದಾಗಿ ಹೇಳಿದ್ದರು. ಎಡಗೈ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್, ಏಷ್ಯಾಕಪ್ನಲ್ಲಿ ಪ್ರಭಾವಿಯಾಗಿದ್ದರು. ಇತ್ತ ರವೀಂದ್ರ ಜಡೇಜಾ ವೇಗವಾಗಿ ಬೌಲ್ ಮಾಡುವ ಛಾತಿ ಹೊಂದಿದ್ದು, ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ನಲ್ಲಿ ನೆರವಾಗಬೇಕಿದೆ.