ಹೈದರಾಬಾದ್, ತೆಲಂಗಾಣ: ನ್ಯೂಜಿಲೆಂಡ್ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ಇಂದು ವಿಶ್ವಕಪ್‌ನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಉಭಯ ತಂಡಗಳ ನಡುವಿನ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂಕಿಅಂಶಗಳ ಪ್ರಕಾರ ನ್ಯೂಜಿಲೆಂಡ್ ಮತ್ತು ನೆದರ್ಲ್ಯಾಂಡ್ಸ್ ಏಕದಿನ ಮಾದರಿಯಲ್ಲಿ 4 ಬಾರಿ ಮುಖಾಮುಖಿಯಾಗಿವೆ. ಕಿವೀಸ್ ತಂಡ ಪ್ರತಿ ಬಾರಿ ನೆದರ್ಲೆಂಡ್ಸ್ ಅನ್ನು ಸೋಲಿಸಿದೆ.
ನ್ಯೂಜಿಲೆಂಡ್ ತನ್ನ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ ಆಘಾತ ನೀಡಿರುವುದು ಗೊತ್ತಿರುವ ಸಂಗತಿ. ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯದಲ್ಲಿ ಸೋತ ನೆದರ್ಲೆಂಡ್ಸ್ ವಿರುದ್ಧ ಟಾಮ್ ಲ್ಯಾಥಮ್ ಬಳಗ ಸತತ ಎರಡನೇ ಗೆಲುವು ದಾಖಲಿಸಲು ಗಮನ ಹರಿಸುತ್ತಿದೆ.
ನ್ಯೂಜಿಲೆಂಡ್ ತಮ್ಮ ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಮೇಲುಗೈ ಸಾಧಿಸಿದ ನಂತರ ತಮ್ಮ ಮನೋ ಬಲ ಹೆಚ್ಚಿಸಿಕೊಂಡಿದೆ. ಟಾಮ್ ಲ್ಯಾಥಮ್ ನೇತೃತ್ವದ ನ್ಯೂಜಿಲೆಂಡ್ ತಂಡ ನೆದರ್ಲ್ಯಾಂಡ್ಸ್ ವಿರುದ್ಧ ವಿಶ್ವಕಪ್ ಅಭಿಯಾನದಲ್ಲಿ ಸತತ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದೆ.
ನ್ಯೂಜಿಲೆಂಡ್ ತಂಡ ನಾಯಕ ಕೇನ್ ವಿಲಿಯಮ್ಸನ್ ಅನುಪಸ್ಥಿತಿಯ ಹೊರತಾಗಿಯೂ ಗುರುವಾರ ಇಂಗ್ಲೆಂಡ್ ಅನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿತು. ಇಂಗ್ಲೆಂಡ್ ಒಂಬತ್ತು ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿತು. ಆದರೆ, ಡೆವೊನ್ ಕಾನ್ವೆ ಅವರ ಬಿರುಸಿನ 152 ಮತ್ತು ರಚಿನ್ ರವೀಂದ್ರ ಅವರ 123 ರನ್‌ಗಳ ಅಬ್ಬರದ ಇನ್ನಿಂಗ್ಸ್ನಿಂದ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು.
ಇಂಗ್ಲೆಂಡ್ ವಿರುದ್ಧ ತಂಡವನ್ನು ಮುನ್ನಡೆಸಿದ ಟಾಮ್ ಲ್ಯಾಥಮ್ ನೇತೃತ್ವದಲ್ಲೇ ಇಂದಿನ ಪಂದ್ಯ ಸಾಗುವುದು. ನ್ಯೂಜಿಲೆಂಡ್ ಮುಖ್ಯ ಕೋಚ್ ಗ್ಯಾರಿ ಸ್ಟೆಡ್ ಅವರು ಡಚ್ ವಿರುದ್ಧದ ಪಂದ್ಯಕ್ಕೆ ಕೇನ್ ವಿಲಿಯಮ್ಸನ್ ಇನ್ನೂ ಸಂಪೂರ್ಣವಾಗಿ ತಯಾರಿ ಆಗಿಲ್ಲ ಎಂದು ಹೇಳಿದ್ದಾರೆ. ನಗರದ ಉಪ್ಪಲ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಟಾಸ್ ಮಧ್ಯಾಹ್ನ 1.30ಕ್ಕೆ ನಡೆಯಲಿದೆ.
ಶುಕ್ರವಾರ ಪಾಕಿಸ್ತಾನ ವಿರುದ್ಧದ ಸೋಲಿನೊಂದಿಗೆ ಡಚ್ಚರು ತಮ್ಮ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಿದರು. ಈ ಪಂದ್ಯದಲ್ಲಿ 81 ರನ್‌ಗಳಿಂದ ಡಚ್ಚರು ಸೋಲನ್ನಪ್ಪಿಕೊಂಡರು. ನೆದರ್ಲ್ಯಾಂಡ್ಸ್ ತಂಡ ವಿಶೇಷವಾಗಿ ಸ್ಪರ್ಧೆಯ ಆರಂಭದ ಪವರ್‌ಪ್ಲೇನಲ್ಲಿ ಮೂರು ಪಾಕಿಸ್ತಾನ ಬ್ಯಾಟರ್‌ಗಳ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ನೆದರ್ಲೆಂಡ್ಸ್‌ನ ಆರಂಭಿಕ ಆಟಗಾರ ವಿಕ್ರಮಜಿತ್ ಸಿಂಗ್ (52) ಮತ್ತು ಬಾಸ್ ಡಿ ಲೀಡೆ (67) ಪ್ರಬಲ ಹೋರಾಟ ನೀಡಿದರೂ ಸಹ ಸಾಧಾರಣ ಮೊತ್ತಕ್ಕೆ ಕುಸಿದರು.
ನೆದರ್ಲ್ಯಾಂಡ್ಸ್ ಬಳಗ: ನಾಯಕ ಸ್ಕಾಟ್ ಎಡ್ವರ್ಡ್ಸ್, ಕಾಲಿನ್ ಅಕರ್ಮನ್, ವೆಸ್ಲಿ ಬ್ಯಾರೆಸಿ, ಬಾಸ್ ಡಿ ಲೀಡ್, ಆರ್ಯನ್ ದತ್, ಸೈಬ್ರಾಂಡ್ ಎಂಗಲ್ಬ್ರೆಕ್ಟ್, ರಿಯಾನ್ ಕ್ಲೈನ್, ತೇಜಾ ನಿಡಮನೂರು, ಮ್ಯಾಕ್ಸ್ ಒ'ಡೌಡ್, ಸಾಕಿಬ್ ಜುಲ್ಫಿಕರ್, ಶರೀಜ್ ಅಹ್ಮದ್, ಲೊಗನ್ಫ್ವಾನ್ ಬೆಕ್ ವ್ಯಾನ್ ಡೆರ್ ಮೆರ್ವೆ, ಪಾಲ್ ವ್ಯಾನ್ ಮೀಕೆರೆನ್, ವಿಕ್ರಮಜಿತ್ ಸಿಂಗ್.
ನ್ಯೂಜಿಲೆಂಡ್ ಬಳಗ: ನಾಯಕ ಕೇನ್ ವಿಲಿಯಮ್ಸನ್, ಟಾಮ್ ಲ್ಯಾಥಮ್, ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ (ಡಬ್ಲ್ಯೂ), ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ವಿಲ್ ಯಂಗ್.
ಓದಿ: ಇಶಾನ್ ವಿಕೆಟ್ ಪಡೆದು ವಿಶ್ವ ದಾಖಲೆ ಬರೆದ ಮಿಚೆಲ್.. ಸ್ಟಾರ್ಕ್ ದಾಳಿಗೆ ಮಾಲಿಂಗ ರೆಕಾರ್ಡ್ ಉಡೀಸ್