ಕೋಲ್ಕತ್ತಾ (ಪಶ್ಚಿಮ ಬಂಗಾಳ): ಏಷ್ಯಾಕಪ್ನ ಸೂಪರ್ 4 ಹಂತದ ಪಂದ್ಯದಲ್ಲಿ ಗಾಯಗೊಂಡ ಅಕ್ಷರ್ ಪಟೇಲ್ ಜಾಗಕ್ಕೆ ರವಿಚಂದ್ರನ್ ಅಶ್ವಿನ್ ಅವರನ್ನು ಆಯ್ಕೆ ಮಾಡಲಾಗಿದೆ. ಇದರಿಂದ ಭಾರತದಲ್ಲೇ ನಡೆಯುವ 2023 ವಿಶ್ವಕಪ್ ಆಡುವ ಸುವರ್ಣಾವಕಾಶವನ್ನು ಅಕ್ಷರ್ ಪಟೇಲ್ ಕಳೆದುಕೊಂಡರು. ಅಕ್ಷರ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರಿನ ಸರಣಿಗೆ ಅಶ್ವಿನ್ಗೆ ವಿಶ್ವಕಪ್ ಹಿನ್ನೆಲೆಯಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಅಶ್ವಿನ್ ವಿಶ್ವಕಪ್ ಅಂತಿಮ ತಂಡ ಸೇರಿಕೊಂಡರು.
ಈಸ್ಟ್ ಬೆಂಗಾಲ್ ಕ್ಲಬ್‌ನ ಕ್ರಿಕೆಟ್ ತಂಡದೊಂದಿಗೆ ಶ್ರಾಚಿ ಗ್ರೂಪ್‌ನ ಟೈ-ಅಪ್ ಸಮಾರಂಭಕ್ಕೆ ಕೋಲ್ಕತ್ತಾಗೆ ಬಂದಿದ್ದ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಸಂದೀಪ್ ಪಾಟೀಲ್, ಅಶ್ವಿನ್ ಅವರನ್ನು ಆರಂಭದಲ್ಲೇ ಏಕೆ ಆಯ್ಕೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಭಾರತದ ಪಿಚ್ಗೆ ಅಶ್ವಿನ್ ಅವರಂತಹ ಬೌಲರ್ ಅಗತ್ಯ ಎಂದು ತಿಳಿಸಿದ್ದು, ಅವರನ್ನು ಕೈಬಿಡಲು ಕಾರಣ ಏನು ಎಂದು ಕೇಳಿದ್ದಾರೆ.
ರವಿಚಂದ್ರನ್ ಅಶ್ವಿನ್ ಟೆಸ್ಟ್ ನಂ.1 ಬೌಲರ್ ಆಗಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅವರಿಗೆ ಅವಕಾಶ ಕೊಡದೇ ಅನ್ಯಾಯ ಆಡಲಾಗಿತ್ತು. ಅನುಭವಿ ಆಟಗಾರನಿಗೆ ತವರಿನಲ್ಲಿ ನಡೆಯುವ ಅದೂ ಸ್ಪಿನ್ನರ್ಗಳಿಗೆ ಹೆಚ್ಚು ನೆಚ್ಚಿನ ಮೈದಾನಗಳಲ್ಲಿ ಅಶ್ವಿನ್ ಅವರ ಕೇರಮ್ ಕೈಚಳ ಯಾರೂ ಮರೆಯಲು ಸಾಧ್ಯವಿಲ್ಲ.
ಕೋಲ್ಕತ್ತಾದಲ್ಲಿ ನಡೆದ ಸಮಾರಂಭದಲ್ಲಿ ಪಾಟೀಲ್ ವಿಶ್ವಕಪ್ ಸೆಮಿಫೈನಲ್ ಬರುವ ನಾಲ್ಕು ತಂಡಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಭಾರತದ ಜೊತೆಗೆ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಪಂದ್ಯಾವಳಿಯ ಕೊನೆಯ-ನಾಲ್ಕು ಹಂತ ಪ್ರವೇಶ ಮಾಡುತ್ತದೆ ಎಂದರು. ಉಪಖಂಡದಲ್ಲಿ ವಿಶ್ವಕಪ್ ನಡೆಯುತ್ತಿದ್ದರೂ ಅವರು ಸೆಮಿಫೈನಲ್‌ಗೆ ಪಾಕಿಸ್ತಾನವನ್ನು ಹೆಸರಿಸಲಿಲ್ಲ. ಪಾಟೀಲ್ ಅವರು ಇತ್ತೀಚಿನ ಫಾರ್ಮ್ ಅನ್ನು ಆಧರಿಸಿ ಶ್ರೇಣಿಯನ್ನು ನಿರ್ಣಯಿಸಿರುವುದಾಗಿ ಹೇಳಿದರು. ಮುಂಬರುವ ವಿಶ್ವಕಪ್‌ಗೆ ಭಾರತವೇ ಹಾಟ್ ಫೇವರಿಟ್. "ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ತಂಡದ ಆಡುವ ಹನ್ನೊಂದರ ಬಳಗವನ್ನು ನಿರ್ಧರಿಸುತ್ತಾರೆ" ಎಂದಿದ್ದಾರೆ.
2023ರ ಐಸಿಸಿ ವಿಶ್ವಕಪ್‌ನಲ್ಲಿ ಭಾರತದ ಆಟ ಬದಲಾಯಿಸುವವರು ಯಾರು ಎಂದು ಕೇಳಿದಾಗ, ಮಾಜಿ ಬ್ಯಾಟರ್ ಹಾರ್ದಿಕ್ ಪಾಂಡ್ಯ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಎಂದರು. 1983 ರಲ್ಲಿ ಭಾರತದ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿರುವುದರ ಜೊತೆಗೆ, ಪಾಟೀಲ್ ಅವರು ಬೆಂಗಳೂರು ಮೂಲದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿರೆಎ)ಯ ಭಾರತೀಯ ಕೋಚ್, ಆಯ್ಕೆದಾರ ಮತ್ತು ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: 2015, 2019ರಲ್ಲಿ ರನ್ನರ್ ಅಪ್; ಈ ಬಾರಿಯಾದರೂ ವಿಶ್ವಕಪ್ ಗೆಲ್ಲುತ್ತಾ ನ್ಯೂಜಿಲೆಂಡ್?