ಇಂಗ್ಲೆಂಡ್: ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಗಾಯದ ಸಮಸ್ಯೆಯಿಂದ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದ ಬೆನ್ನಲ್ಲೆ, ಮತ್ತೊಂದು ಆಘಾತ ಎದುರಾಗಿದೆ.
ನಾಲ್ಕನೇ ಕ್ರಮಾಂಕಕ್ಕೆ ಆಯ್ಕೆಯಾಗಿದ್ದ ಆಲ್ ರೌಂಡ್ ಆಟಗಾರ ವಿಜಯ್ ಶಂಕರ್ ಇದೀಗ ಗಾಯಕ್ಕೆ ತುತ್ತಾಗಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕಾಗಿ ಭಾರತ ತಂಡದ ಆಟಗಾರರು ನೆಟ್ನಲ್ಲಿ ಅಭ್ಯಾಸ ಮಾಡುತ್ತಿದ್ದರು. ಈ ವೇಳೆ ಬುಮ್ರಾ ಎಸೆದ ಯಾರ್ಕರ್ ವಿಜಯ್ ಶಂಕರ್ ಕಾಲಿಗೆ ಬಡಿದಿದೆ.
ಕೂಡಲೆ ವಿಜಯ್ ಶಂಕರ್ಗೆ ಚಿಕಿತ್ಸೆ ನೀಡಲಾಗಿದ್ದು ಗಂಭೀರ ಸ್ವರೂಪದ ಗಾಯವೇನು ಆಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸ್ವಲ್ಪ ನೋವಿದೆ ಅಷ್ಟೆ, ಭಯ ಪಡುವ ಅಗತ್ಯವಿಲ್ಲ ಎಂದಿದ್ದಾರೆ ಎಂದು ಟೀಂ ಇಂಡಿಯಾ ಮೂಲಗಳು ತಿಳಿಸಿವೆ.
ಈಗಾಗಲೆ ಶಿಖರ್ ಧವನ್ ಟೂರ್ನಿಯಿಂದ ಔಟ್ ಆಗಿದ್ದು, ಪಾಕ್ ವಿರುದ್ಧದ ಪಂದ್ಯದಲ್ಲಿ ಎಡಗಾಲಿನ ಹ್ಯಾಮ್ಸ್ಟ್ರಿಂಗ್ಗೆ ತುತ್ತಾಗಿದ್ದ ಸ್ವಿಂಗ್ ಸ್ಟಾರ್ ಭುವನೇಶ್ವರ್ ಕುಮಾರ್ ಕೂಡ ಯಾವಾಗ ತಂಡಕ್ಕೆ ಮರಳುತ್ತಾರೆ ಎಂದು ಬಿಸಿಸಿಐ ಇನ್ನೂ ಸ್ಪಷ್ಟಪಡಿಸಿಲ್ಲ.
ಪಾಕ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದ ವಿಜಯ್ ಶಂಕರ್ ಎರಡು ವಿಕೆಟ್ ಪಡೆದು ಮಿಂಚಿದ್ರು. ಇದೀಗ ಅವರ ಗಾಯದ ಸಮಸ್ಯೆ ಅಭಿಮಾನಿಗಳಲ್ಲಿ ಆತಂಕವನ್ನುಂಟು ಮಾಡಿದೆ.