ಲಂಡನ್: ಐಸಿಸಿ ವಿಶ್ವಕಪ್‌ನ ನಿರ್ಣಾಯಕ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ನೀಡಿದ ಆರಂಭಿಕ ಆಘಾತದಿಂದ ನ್ಯೂಜಿಲೆಂಡ್ ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ ಮತ್ತೆ ಪ್ರಮುಖ 2 ವಿಕೆಟ್ ಕಳೆದುಕೊಂಡಿದೆ.
ತಂಡದ ಮೊತ್ತ ಕೇವಲ 29 ರನ್ ಇದ್ದಾಗ ಗಪ್ಟಿಲ್ ವಿಕೆಟ್ ಕಳೆದುಕೊಂಡ ನ್ಯೂಜಿಲೆಂಡ್ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಹೆನ್ರಿ ನಿಕೋಲ್ಸ್ ಜೊತೆಗೂಡಿದ ನಾಯಕ ಕೇನ್ ವಿಲಿಯಮ್ಸನ್ ಹೆಚ್ಚಿನ ವಿಕೆಟ್ ನಷ್ಟವಾಗದಂತೆ ರಕ್ಷಣಾತ್ಮಕ ಆಟಕ್ಕೆ ಮುಂದಾದರು.
ಇನ್ನಿಂಗ್ಸ್ ಕಟ್ಟುವತ್ತ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಕೇನ್ ಮೊದಲ 22 ಎಸೆತಗಳಲ್ಲಿ ಎರಡು ರನ್ ಮಾತ್ರ ಗಳಿಸಿದರು. ಅಂತಿಮವಾಗಿ 53 ಎಸೆತಗಳಲ್ಲಿ 30 ರನ್ಗಳಿಸಿ ಲಿಯಾಮ್ ಪ್ಲಂಕೆಟ್ ಎಸೆತದಲ್ಲಿ ವಿಕೆಟ್ ಕೀಪರ್ ಜೋಸ್ ಬಟ್ಲರ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ಆರಂಭಿಕ ಒತ್ತಡದಿಂದ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿದ್ದ ಹೆನ್ರಿ ನಿಕೋಲ್ಸ್ ಅರ್ಧ ಶತಕ ಪೂರೈಸಿದರು. ಅಂತಿಮವಾಗಿ 77 ಎಸೆತಗಳಲ್ಲಿ 55 ರನ್ ಗಳಿಸಿ ಲಿಯಾಮ್ ಪ್ಲಂಕೆಟ್ ಎಸೆತದಲ್ಲಿ ಬೌಲ್ಡ್ ಆದರು.
ಸದ್ಯ 28 ಓವರ್ಗೆ 122 ರನ್ಗಳಿಸಿರುವ ನ್ಯೂಜಿಲೆಂಡ್ ತನ್ನ ಮೊದಲ ಮೂರು ವಿಕೆಟ್ ಕಳೆದುಕೊಂಡಿದೆ. ರಾಸ್ ಟೇಲರ್ ಹಾಗೂ ಟಾಮ್ ಲಾಥಮ್ ಕ್ರಮವಾಗಿ 8 ಮತ್ತು 2 ರನ್ಗಳ ಮೂಲಕ ಬ್ಯಾಟಿಂಗ್ ನಡೆಸುತ್ತಿದ್ದಾರೆ.