ಲಂಡನ್: ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯಗಳು ನಡೀತಿದ್ದು, ಬಹುತೇಕ ಸೆಮಿಫೈನಲ್ಗೆ 4 ತಂಡಗಳು ತಮ್ಮ ಸ್ಥಾನ ಭದ್ರಪಡಿಸಿಕೊಂಡಿವೆ. ಆದ್ರೆ ಅದ್ಭುತ ನಡೆದರೆ ಮಾತ್ರ ಕಿವೀಸ್ ಸ್ಥಾನದಲ್ಲಿ ಪಾಕಿಸ್ತಾನ ಸೆಮಿಫೈನಲ್ಗೆ ಲಗ್ಗೆ ಇಡಲಿದೆ.
ವಿಶ್ವಕಪ್ ಟೂರ್ನಿ ನಿಯಮದ ಪ್ರಕಾರ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ತಂಡ ಮತ್ತು ನಾಲ್ಕನೇ ಸ್ಥಾನದಲ್ಲಿರುವ ತಂಡ ಸೆಮಿಫೈನಲ್ನಲ್ಲಿ ಮುಖಾಮುಖಿಯಾದ್ರೆ, ಎರಡನೇ ಸ್ಥಾನದಲ್ಲಿರು ತಂಡ ಮೂರನೇ ಸ್ಥಾನದಲ್ಲಿರುವ ತಂಡದೊಂದಿಗೆ ಸೆಣೆಸಾಡಬೇಕು.
ಸದ್ಯದ ಅಂಕಪಟ್ಟಿಯಲ್ಲಿ ತಂಡಗಳು ತಾವಿರುವ ಸ್ಥಾನದ ಆಧಾರದ ಮೇಲೆ ಹೇಳುವುದಾದರೆ, ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡ ಸೆಮಿಫೈನಲ್ನಲ್ಲಿ ಕಿವೀಸ್ ಪಡೆಯನ್ನ ಎದುರಿಸಿದ್ರೆ, ಭಾರತ ತಂಡ, ಇಂಗ್ಲೆಂಡ್ ವಿರುದ್ಧ ಸೆಣೆಸಾಡಲಿದೆ.
ಒಂದು ವೇಳೆ, ಭಾರತ ಶ್ರೀ ಲಂಕಾ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಂಡರೆ ಭಾರತ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಲಿದೆ. ಆಗ ಮಾತ್ರ ಸೆಮಿಫೈನ್ನಲ್ಲಿ ಕೊಹ್ಲಿ ಮತ್ತು ವಿಲಿಯಮ್ಸನ್ ಹುಡುಗರು ಮುಖಾಮುಖಿಯಾಗಲಿದ್ದು, ಆಸೀಸ್, ಇಂಗ್ಲೆಂಡ್ ವಿರುದ್ಧ ಹೋರಾಡಬೇಕಾಗುತ್ತದೆ.
ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಫಿಕ್ಸ್ ಆಗಿದ್ದು, ಯಾವುದೇ ಬದಲಾವಣೆ ಆಗುವುದಿಲ್ಲ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ಲೀಗ್ ಹಂತದ ಇನ್ನೊಂದು ಪಂದ್ಯ ಬಾಕಿ ಇದ್ದು, ಮೊದಲ ಮತ್ತು ಎರಡನೇ ಸ್ಥಾನದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ.
ಒಟ್ಟಾರೆ ಟೀಂ ಇಂಡಿಯಾ, ಇಂಗ್ಲೆಂಡ್ ಅಥವಾ ನ್ಯೂಜಿಲ್ಯಾಂಡ್ ತಂಡವನ್ನ ಸೆಮಿಫೈನಲ್ನಲ್ಲಿ ಎದಿರಿಸೋದು ಪಕ್ಕಾ.