ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಮಹೆಂದ್ರ ಸಿಂಗ್ ಧೋನಿ ಒಬ್ಬ ಅದ್ಭುತ ಮೈಂಡ್ ರೀಡರ್. ನನಗೆ ಯಾವುದೇ ಸಲಹೆಗಳು ಬೇಕೆಂದರೆ ನಾನು ನೇರವಾಗಿ ಧೋನಿ ಅವರನ್ನ ಕೇಳುತ್ತೇನೆ ಎಂದು ಭಾರತ ತಂಡದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಹೇಳಿದ್ದಾರೆ.
ಸುದ್ದಿ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಚಹಾಲ್, ನನಗೆ ಏನೇ ಸಲಹೆಗಳು ಬೇಕೆಂದರೂ ನಾನು ನೇರವಾಗಿ ಧೋನಿ ಬಳಿ ತೆರಳುತ್ತೇನೆ. ಅವರ ಅನನ್ಯವಾದ ಅನುಭವ ನಮಗೆ ತುಂಬಾ ಸಹಕಾರಿಯಾಗುತ್ತದೆ. ಕೇವಲ ನಾನು ಮಾತ್ರವಲ್ಲ ತಂಡದ ಇತರೆ ಸದಸ್ಯರು ಕೂಡ ಧೋನಿ ಬಳಿ ಸಮಯೋಚಿತ ಸಲಹೆಗಾಗಿ ಧಾವಿಸುತ್ತಾರೆ ಎಂದಿದ್ದಾರೆ.
ಕೀಪಿಂಗ್ ಮಾಡುವಾಗಲೂ ಧೋನಿ ಕಣ್ಣು ಬೌಲರ್ ಮತ್ತು ಬ್ಯಾಟ್ಸ್ಮನ್ ಮೇಲಿರುತ್ತದೆ. ಬ್ಯಾಟ್ಸ್ಮನ್ ಆಂಗಿಕ ಚಲನೆ ಮತ್ತು ಅವರ ಮನಸ್ಸನ್ನು ಧೋನಿ ಉತ್ತಮವಾಗಿ ಅರ್ಥೈಸಿಕೊಳ್ಳುತ್ತಾರೆ. ಆ ಮೂಲಕ ಮುಂದಿನ ಎಸೆತ ಹೇಗಿರಬೇಕು ಎಂದು ನಮಗೆ ಸಲಹೆ ನೀಡುತ್ತಾರೆ. ಇಂತಾ ಹಲವು ಸಲಹೆಗಳು ನಾನು ವಿಕೆಟ್ ಪಡೆಯಲು ಸಹಕಾರಿಯಾಗಿದೆ ಎಂದು ನೆನಪಿಸಿಕೊಂಡರು.
ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲೇ ಟಿ-20 ಮತ್ತು ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿರುವ ಚಹಾಲ್, 41 ಏಕದಿನ ಪಂದ್ಯಗಳಲ್ಲಿ ಒಟ್ಟು 72 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.