ದುಬೈ: ಇಂದು ಬಿಡುಗಡೆಯಾಗಿರುವ ಐಸಿಸಿ ವಾರ್ಷಿಕ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡ ಮತ್ತೆ ಮೊದಲ ಸ್ಥಾನ ಅಲಂಕರಿಸಿದೆ.
24 ಪಂದ್ಯಗಳಲ್ಲಿ 2914 ಅಂಕ ಗಳಿಸಿರುವ ಭಾರತ 121 ರೇಟಿಂಗ್ ಪಾಯಿಂಟ್ಗಳನ್ನು ಪಡೆದು ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಸತತ 5ನೇ ವರ್ಷವೂ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.
ವಿರಾಟ್ ಕೊಹ್ಲಿಯ ಹುಡುಗರ ವಿರುದ್ಧ ಟಸ್ಟ್ ಸರಣಿ ಸೋತ ನ್ಯೂಜಿಲ್ಯಾಂಡ್ ತಂಡ 120 ರೇಟಿಂಗ್ ಪಾಯಿಂಟ್ಗಳ ಮೂಲಕ ಎರಡನೇ ಸ್ಥಾನದಲ್ಲಿದೆ. ಕಿವೀಸ್ ತಂಡ 18 ಟೆಸ್ಟ್ ಪಂದ್ಯಗಳಿಂದ 2166 ಅಂಕಗಳನ್ನು ಸಂಪಾದಿಸಿದೆ
ಭಾರತ ತಂಡ ಕಳೆದ ಎರಡು ಸರಣಿಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ 2-1 ಮತ್ತು ಇಂಗ್ಲೆಂಡ್ ವಿರುದ್ಧ 3-1 ಪಾಯಿಂಟುಗಳ ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ. ಮೇ 2020 ವರೆಗೂ ಶೇಕಡಾ ನೂರರಷ್ಟು ಪಂದ್ಯಗಳನ್ನು ಐಸಿಸಿ ನಡೆಸಿತ್ತು. ಕೊರೊನಾ ಮಹಾಮಾರಿಯಿಂದ ಕಳೆದ ವರ್ಷದಿಂದ ಇಲ್ಲಿಯವರೆಗೆ ಕೇವಲ ಶೇ 50ರಷ್ಟು ಪಂದ್ಯಗಳನ್ನು ನಡೆಸಲಾಗಿದೆ.
ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯ ಪ್ರಕಾರ, ಭಾರತ ತಂಡ 121, ನ್ಯೂಜಿಲ್ಯಾಂಡ್ 120, ಇಂಗ್ಲೆಂಡ್ 109, ಆಸ್ಟ್ರೇಲಿಯಾ ತಂಡ 108, ಪಾಕಿಸ್ತಾನ ತಂಡ 94, ವೆಸ್ಟ್ ಇಂಡೀಸ್ 84, ದಕ್ಷಿಣ ಆಫ್ರಿಕಾ 80, ಶ್ರೀಲಂಕಾ 78, ಬಾಂಗ್ಲಾದೇಶ 46 ಮತ್ತು ಜಿಂಬಾಬ್ವೆ ತಂಡ 35 ರೇಟಿಂಗ್ ಅಂಕದೊಂದಿಗೆ 10ನೇ ಸ್ಥಾನ ಪಡೆದಿದೆ.
ಜೂನ್ 18 ರಿಂದ 22 ರವರೆಗೆ ಸೌತಾಂಪ್ಟನ್‌ನ ಏಗಾಸ್ ಬೌಲ್‌ನಲ್ಲಿ ನಡೆಯುವ ಉದ್ಘಾಟನಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಲಿವೆ.
ಇದನ್ನೂ ಓದಿ: ರಾಜ್ಯದಲ್ಲಿ 2ನೇ ಡೋಸ್ ವ್ಯಾಕ್ಸಿನ್ ಕೊರತೆ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ