ದುಬೈ: ಐಸಿಸಿ ಟಿ-20 ವಿಶ್ವಕಪ್ ಬಳಿಕ ಟೀಂ ಇಂಡಿಯಾದ ಕೋಚ್ ಆಗಿ ಕನ್ನಡಿಗ, ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಆಯ್ಕೆಯಾಗಲಿದ್ದಾರೆಂಬ ವರದಿ ಬಹಿರಂಗಗೊಂಡಿದೆ. ಈ ವಿಚಾರವಾಗಿ ಇದೇ ಮೊದಲ ಸಲ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಯುಎಇ ಮತ್ತು ಒಮನ್ನಲ್ಲಿ ಭಾನುವಾರದಿಂದ ಟಿ-20 ವಿಶ್ವಕಪ್ ಆರಂಭಗೊಳ್ಳಲಿದ್ದು, ಹೀಗಾಗಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದರು. ಈ ವೇಳೆ, ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗಲಿದ್ದಾರೆಂದು ಕೇಳಿದಾಗ, ಏನಾಗುತ್ತಿದೆ ಎಂದು ನಿಖರವಾಗಿ ತಿಳಿದಿಲ್ಲ. ಹೆಚ್ಚಾಗಿ ಈ ವಿಷಯವಾಗಿ ಯಾರೊಂದಿಗೂ ವಿವರವಾಗಿ ಚರ್ಚೆ ನಡೆಸಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮೆಂಟರ್ ಆಗಿ ಆಯ್ಕೆಯಾಗಿರುವ ಮಹೇಂದ್ರ ಸಿಂಗ್ ಧೋನಿ ಅವರನ್ನು ಸ್ವಾಗತ ಮಾಡಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ ಎಂದಿರುವ ವಿರಾಟ್, ಅವರೊಬ್ಬ ಚಾಂಪಿಯನ್ ಪ್ಲೇಯರ್ ಎಂದು ಹಾಡಿಹೊಗಳಿದ್ದಾರೆ.
48 ವರ್ಷದ ದ್ರಾವಿಡ್, ಟೀಂ ಇಂಡಿಯಾ ಕಂಡಿರುವ ಅತ್ಯುತ್ತಮ ಬ್ಯಾಟರ್ಗಳಲ್ಲಿ ಒಬ್ಬರಾಗಿದ್ದರು. ಕಳೆದ ಆರು ವರ್ಷಗಳಿಂದ A ಹಾಗೂ U-19 ತಂಡದ ಉಸ್ತುವಾರಿ ಹೊತ್ತುಕೊಂಡು ರಿಷಭ್ ಪಂತ್, ಪೃಥ್ವಿ ಶಾ, ಆವೇಶ್ ಖಾನ್, ಹನುಮ ವಿಹಾರಿ, ಶುಬ್ಮನ್ ಗಿಲ್ ಸೇರಿದಂತೆ ಅನೇಕ ಪ್ಲೇಯರ್ಸ್ಗೆ ತಯಾರು ಮಾಡಿದ್ದಾರೆ. ಇದೀಗ ಅವರು ಟೀಂ ಇಂಡಿಯಾ ಹಿರಿಯ ತಂಡದ ಕೋಚ್ ಆಗಲಿದ್ದಾರೆ ಎಂಬ ವಿಷಯ ಬಹಿರಂಗಗೊಂಡಿದೆ.
ಟೀಂ ಇಂಡಿಯಾ ಅಕ್ಟೋಬರ್ 24ರಿಂದ ತನ್ನ ಅಭಿಯಾನ ಆರಂಭ ಮಾಡಲಿದ್ದು, ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ ಸೆಣಸಾಟ ನಡೆಸಲಿದೆ.