ಬ್ರಿಸ್ಟಲ್: 2019ರ ವಿಶ್ವಕಪ್ನಲ್ಲಿ ಶನಿವಾರ ನಡೆದ ಮತ್ತೊಂದು ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಆಸ್ಟ್ರೇಲಿಯಾ ತಂಡ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ವಿಶ್ವಕಪ್ನಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಈ ಬಾರಿಯ ಟೂರ್ನಿಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.
ಲಂಡನ್ನ ಬ್ರಿಸ್ಟಲ್ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 207 ರನ್ ಗಳಿಸಿ 38.2 ಓವರ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸರ್ವಪತನ ಕಂಡಿತು. ಬಳಿಕ ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ, ನಾಯಕ ಆ್ಯರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಅವರ ಅರ್ಧಶತಕಗಳ ನೆರವಿನಿಂದ ಮೂರು ವಿಕೆಟ್ ನಷ್ಟಕ್ಕೆ 34.5 ಓವರ್ಗಳಲ್ಲೇ ಗೆಲುವು ತನ್ನದಾಗಿಸಿಕೊಂಡಿತು.
ಅಫ್ಘಾನಿಸ್ತಾನ ಪರ ರಹಮತ್ ಶಾ (43), ಹಸ್ಮತುಲ್ಲಾ ಶಾಹಿದಿ (18), ಗುಲ್ಬದಿನ್ ನೈಬ್ (31), ನಜಿಬುಲ್ಲಾ ಜದ್ರಾನ್ (51) ಮತ್ತು ರಶೀದ್ ಖಾನ್ (27) ರನ್ ಪೇರಿಸಿದರು.
ಆಸ್ಟ್ರೇಲಿಯಾ ಪರ ಬೌಲಿಂಗ್ನಲ್ಲಿ ಕಮ್ಮಿನ್ಸ್ ಮತ್ತು ಜಂಪಾ ತಲಾ 3 ವಿಕೆಟ್, ಸ್ಟೋಯ್ನಿಸ್ 2 ವಿಕೆಟ್ ಪಡೆದು ಮಿಂಚಿದರು. ಇನ್ನು ಬ್ಯಾಟಿಂಗ್ನಲ್ಲಿ ಫಿಂಚ್ (66), ಡೇವಿಡ್ ವಾರ್ನರ್ ಅಜೇಯ (89) ಹಾಗೂ ಸ್ಮಿತ್ 18 ರನ್ ಪೇರಿಸಿ ತಂಡವನ್ನು ಗೆಲ್ಲಿಸಿದರು.