ಧರ್ಮಶಾಲಾ: ನಾಳೆಯಿಂದ ಪ್ರವಾಸಿ ದಕ್ಷಿಣ ಆಫ್ರಿಕಾ-ಭಾರತ ನಡುವಿನ ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯ ಆರಂಭಗೊಳ್ಳಲಿದೆ. ಹಿಮಾಚಲ ಪ್ರದೇಶದ ಧರ್ಮಶಾಲಾ ಮೈದಾನದಲ್ಲಿ ಉಭಯ ತಂಡಗಳು ಸೆಣಸಾಟ ನಡೆಸಲಿವೆ. ಈ ಮಧ್ಯೆ ಕ್ರಿಕೆಟ್ ಪಂದ್ಯದ ಮೇಲೆ ಕೊರೊನಾ ಕಾರ್ಮೋಡ ಆವರಿಸಿದೆ.
ಕೊರೊನಾ ಭೀತಿ ಭಾರತದಲ್ಲೂ ಶುರುವಾಗಿರುವ ಕಾರಣ ಉಭಯ ತಂಡದ ಆಟಗಾರರು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಮೈದಾನದಲ್ಲಿ ಹ್ಯಾಂಡ್ಶೇಕ್ ಮಾಡದಿರಲು ಆಟಗಾರರು ನಿರ್ಧರಿಸಿದ್ದಾರೆ. ಟೀಂ ಇಂಡಿಯಾ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಮುಖಕ್ಕೆ ಮುಖಗವಸು ಧರಿಸಿರುವ ಫೋಟೋ ಶೇರ್ ಮಾಡಿದ್ದಾರೆ. ದೆಹಲಿ ಏರ್ಪೋರ್ಟ್ನಲ್ಲಿ ತಾವು ಮಾಸ್ಕ್ ಧರಿಸಿ ಪ್ರಯಾಣ ಬೆಳೆಸಿರುವ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಕ್ರಿಕೆಟ್ ಪಂದ್ಯ ಆಡುತ್ತಿದ್ದ ವೇಳೆ ಪ್ರೇಕ್ಷಕರಿಂದ ದೂರ ಉಳಿದುಕೊಳ್ಳುವಂತೆ ಕ್ರಿಕೆಟರ್ಸ್ಗೆ ಸೂಚನೆ ನೀಡಲಾಗಿದ್ದು, ಯಾವುದೇ ಕಾರಣಕ್ಕೂ ಅವರೊಂದಿಗೆ ಪರಸ್ಪರ ಕೈ ಕುಲುಕದಂತೆ ತಿಳಿಸಲಾಗಿದೆ.
![Yuzvendra Chahal](https://etvbharatimages.akamaized.net/etvbharat/prod-images/6361086_twddfdf.jpg)
ದಕ್ಷಿಣ ಆಫ್ರಿಕಾ ತಂಡದ ಕೋಚ್ ಮಾರ್ಕ್ ಬೌಚರ್ ಪ್ರತಿಕ್ರಿಯಿಸಿದ್ದು, ಭಾರತದಲ್ಲೂ ಕೊರೊನಾ ಪ್ರಕರಣಗಳು ಪತ್ತೆಯಾಗಿರುವ ಕಾರಣ ಪರಸ್ಪರ ಕೈ ಕುಲುಕದಿರಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.