ಹೈದರಾಬಾದ್: 2011ರ ವಿಶ್ವಕಪ್ ಹೀರೋ ಹಾಗೂ ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ತಮ್ಮ ನಿವೃತ್ತಿಯ ಅಸಲಿ ಕಾರಣ ಬಿಚ್ಚಿಟ್ಟಿದ್ದು, ಇದೇ ವೇಳೆ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ್ದಾರೆ.
ಯೋಯೋ ಟೆಸ್ಟ್ನಲ್ಲಿ ಪಾಸ್ ಆಗಿದ್ದರೂ ಆಯ್ಕೆ ಸಮಿತಿ ನನ್ನನ್ನು ರಾಷ್ಟ್ರೀಯ ತಂಡಕ್ಕೆ ಸೇರಿಸಿಲ್ಲ ಎಂದು ಸೆಲೆಕ್ಷನ್ ಕಮಿಟಿಯ ಧೋರಣೆ ವಿರುದ್ಧ ಯುವಿ ಆಕ್ರೋಶ ಹೊರಹಾಕಿದ್ದಾರೆ.
ಯುವಿ ಜರ್ಸಿ ನಂಬರ್ 12 ಅನ್ನು ನಿವೃತ್ತಿಗೊಳಿಸುವಂತೆ ಮಾಜಿ ಕ್ರಿಕೆಟಿಗನಿಂದ ಮನವಿ
ಶ್ರೀಲಂಕಾ ಸರಣಿಗೂ ಮುನ್ನ ಗಾಯಗೊಂಡಿದ್ದೆ. ಆದರೆ ಸರಣಿಗೆ ಸಿದ್ಧನಾಗುವುದಾಗಿ ಆಯ್ಕೆ ಸಮಿತಿಗೆ ತಿಳಿಸಿದ್ದೆ. ಆದರೆ ಏಕಾಏಕಿ ಯೋಯೋ ಟೆಸ್ಟ್ ಜಾರಿಗೆ ತಂದರು. ಆ ವೇಳೆಗೆ 36 ವರ್ಷವಾಗಿದ್ದ ನನಗೆ ಯೋಯೋ ಟೆಸ್ಟ್ ಪಾಸ್ ಮಾಡುವುದು ಕೊಂಚ ಕಠಿಣವಾಗಿತ್ತು. ಹಾಗಿದ್ದರೂ ನಾನು ಯೋಯೋ ಟೆಸ್ಟ್ ಪಾಸ್ ಮಾಡಿದೆ. ಇಷ್ಟಾದರೂ ನನ್ನನ್ನು ದೇಶೀಯ ಟೂರ್ನಿಯಲ್ಲಿ ಆಡುವಂತೆ ಸಮಿತಿ ಹೇಳಿತು ಎಂದು ಯುವರಾಜ್ ಸಿಂಗ್ ನಿವೃತ್ತಿಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ಉತ್ತಮವಾಗಿ ತಂಡದಲ್ಲಿ ಪ್ರದರ್ಶನ ನೀಡುತ್ತಿದ್ದರೂ ತಂಡದಿಂದ ಹೊರಗುಳಿಯಬೇಕಾಯಿತು. ಈ ಬೆಳವಣಿಗೆ ನಿಜಕ್ಕೂ ಅನಿರೀಕ್ಷಿತವಾಗಿತ್ತು. ನನ್ನಂತೆ ಕೆಲ ಆಟಗಾರರ ವಿದಾಯವೂ ಇದೇ ರೀತಿಯಾಗಿತ್ತು. ವೃತ್ತಿ ಜೀವನದ ಕೊನೆಯಲ್ಲಿ ಆಯ್ಕೆ ಸಮಿತಿ ಉತ್ತಮವಾಗಿ ನಡೆಸಿಕೊಳ್ಳಲಿಲ್ಲ ಎಂದು ಯುವರಾಜ್ ಆಕ್ರೋಶಭರಿತರಾಗಿ ಮಾತನಾಡಿದ್ದಾರೆ.