ನವದೆಹಲಿ: ಭಾರತದ ಲೆಜೆಂಡರಿ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್ ಮತ್ತು ಸಚಿನ್ ತೆಂಡೂಲ್ಕರ್ ಅವರಂತಹ ಶ್ರೇಷ್ಠ ಆಟಗಾರರನ್ನು ಮತ್ತೆ ಸೃಷ್ಟಿಸುವುದು ಕಷ್ಟ ಎಂದು ಪಾಕಿಸ್ತಾನ ಲೆಜೆಂಡ್ ಜಾವೇದ್ ಮಿಯಾಂದಾದ್ ಅಭಿಪ್ರಾಯ ಪಟ್ಟಿದ್ದಾರೆ.
1987ರಲ್ಲಿ ಭಾರತ ತಂಡದ ಅವಿಭಾಜ್ಯ ಅಂಗದಂತಿದ್ದ ಸುನಿಲ್ ಗವಾಸ್ಕರ್ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು. ಈ ಸಂದರ್ಭದಲ್ಲಿ ಭಾರತೀಯ ಅಭಿಮಾನಿಗಳು ಒಬ್ಬ ಅದ್ಭುತ ಆಟಗಾರನನ್ನು ಕಳೆದುಕೊಳ್ಳುತ್ತಿದ್ದೇವೆಂದು ದುಃಖಿತರಾಗಿದ್ದರು. ಅಲ್ಲದೇ ಸಚಿನ್ ತೆಂಡೂಲ್ಕರ್ ಬರುವವರೆಗೂ ಶ್ರೇಷ್ಠ ಬ್ಯಾಟ್ಸ್ಮನ್ ಕೊರತೆ ಕಾಡುತ್ತಿತ್ತು.
1989ರಲ್ಲಿ ಸಚಿನ್ ಕ್ರಿಕೆಟ್ಗೆ ಪದಾರ್ಪಣ ಮಾಡಿದ ಬಳಿಕ ನಿಧಾನವಾಗಿ ಕ್ರಿಕೆಟ್ನಲ್ಲಿ ಆಧಿಪತ್ಯ ಸಾಧಿಸಿ 2 ದಶಕಗಳ ಕಾಲ ಕ್ರಿಕೆಟ್ ಜಗತ್ತನ್ನು ಆಳಿದರು. ಇವರನ್ನು ಆರಂಭದಲ್ಲಿ ಗವಾಸ್ಕರ್ಗೆ ಹೋಲಿಸಲಾಗುತ್ತಿತ್ತು. ಇವರ ನಂತರ ಪ್ರಸ್ತುತ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಸಚಿನ್ರ ಹಾದಿಯನ್ನು ಹಿಡಿದಿದ್ದು, ಕ್ರಿಕೆಟ್ ದಿಗ್ಗಜರೆಲ್ಲರೂ ಸಚಿನ್ಗೆ ಹೋಲಿಕೆ ಮಾಡುತ್ತಿದ್ದಾರೆ.
ಆದರೆ, ಪ್ರಸ್ತುತ ಕ್ರಿಕೆಟರ್ಸ್ಗಳನ್ನು ತಮ್ಮ ಜನರೇಸನ್ ಕ್ರಿಕೆಟಿಗರ ಜೊತೆ ಹೋಲಿಕೆ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಮಿಯಾಂದಾದ್ ತಿಳಿಸಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನದ ಮಾಜಿ ಬ್ಯಾಟ್ಸ್,ಮನ್ ಅಮಿರ್ ಸೊಹೈಲ್ ವಿರಾಟ್ ಕೊಹ್ಲಿ ಮತ್ತು ಮಿಯಾಂದಾದ್ ಹೇಗೆ ತಂಡಕ್ಕಾಗಿ ಪ್ರದರ್ಶನ ನೀಡುತ್ತಾರೆ ಎಂದು ಇಬ್ಬರನ್ನು ಹೋಲಿಕೆ ಮಾಡಿ ಮಾತನಾಡಿದ್ದರು. ಇದಕ್ಕೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿರುವ ಮಿಯಂದಾದ್, ಆಧುನಿಕ ಕ್ರಿಕೆಟಿಗರನ್ನು ತಮ್ಮ ಕಾಲದ ಕ್ರಿಕಟಿಗರ ಜೊತೆ ಹೋಲಿಕೆ ಮಾಡುವುದು ಕಷ್ಟ. ನಮ್ಮ ಕಾಲದಲ್ಲಿ ರನ್ಗಳಿಸುವುದು ಸುಲಭದ ಮಾತಾಗಿರಲಿಲ್ಲ ಎಂದು ಹೇಳಿದ್ದಾರೆ.
ಹಾಗೆಯೇ ಮಿಯಾಂದಾದ್ ಪ್ರಕಾರ ಮತ್ತೊಬ್ಬ ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಕಾಣುವುದು ಅಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ಕಾಲದ ಯಾವ ಒಬ್ಬ ಆಟಗಾರನನ್ನು ಈಗಿನ ಪೀಳಿಗೆಯ ಆಟಗಾರರೊಂದಿಗೆ ಹೋಲಿಸಬಹುದು ಎಂದು ನಾನು ಭಾವಿಸುವುದಿಲ್ಲ. ನೀವು ಇನ್ನೊಬ್ಬ ಸುನಿಲ್ ಗವಾಸ್ಕರ್ ಅಥವಾ ಸಚಿನ್ ತೆಂಡೂಲ್ಕರ್ ತಯಾರು ಮಾಡಲು ಸಾಧ್ಯವಿಲ್ಲ. ನೀವು ಯಾರನ್ನಾದೂ ಆರಾಧಿಸಬಹುದು. ಆದರೆ ನೀವು ವೈಯಕ್ತಿಕ ಗುಣ ಮತ್ತು ವರ್ಗವನ್ನು ಬದಲಾಯಿಸುವುದಿಲ್ಲ. ವಿವಿಧ ತಲೆಮಾರಿನ ಆಟಗಾರರನ್ನು ಹೋಲಿಸಲಾಗುವುದಿಲ್ಲ ಎಂದು ತಮ್ಮ ಮತ್ತು ವಿರಾಟ್ ಕೊಹ್ಲಿ ನಡುವಿನ ಹೋಲಿಕೆಯನ್ನು ಮಿಯಾಂದಾದ್ ತಿರಸ್ಕರಿಸಿದ್ದಾರೆ.
ನಮ್ಮ ಕಾಲಘಟ್ಟದಲ್ಲಿ ಮಾಲ್ಕಮ್ ಮಾರ್ಷಲ್, ರಿಚರ್ಡ್ ಹ್ಯಾಡ್ಲಿ, ಡೇನಿಸ್ ಲಿಲ್ಲಿ ಮತ್ತು ಜೆಫ್ ಥಾಮ್ಸನ್ ಅವರಂತಹ ಕಠಿಣ ಬೌಲರ್ಗಳನ್ನು ಎದುರಿಸುತ್ತಿದ್ದೆವು. ಆಗಿನ ಬೌಲರ್ಗಳಿಗೂ ಈಗಿನ ಬೌಲರ್ಗಳಿಗೂ ಬ್ಯಾಟಿಂಗ್ ನಡೆಸುವುದಕ್ಕೆ ತುಂಬಾ ವ್ಯತ್ಯಾಸವಿದೆ ಎಂದಿದ್ದಾರೆ.
ಮಿಯಾಂದಾದ್ ಪಾಕಿಸ್ತಾನದ ಪರ 124 ಟೆಸ್ಟ್ ಹಾಗೂ 233 ಏಕದಿನ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 8,832 ರನ್, ಏಕದಿನ ಕ್ರಿಕೆಟ್ನಲ್ಲಿ 7381 ರನ್ಗಳಿಸಿದ್ದಾರೆ.