ಮುಂಬೈ: ಟೀಂ ಇಂಡಿಯಾ ಆಟಗಾರರಿಗೆ ಕನಸಲ್ಲೂ ಕಾಡುವ ಯೋಯೋ ಟೆಸ್ಟ್ ಮತ್ತೆ ಚಾಲ್ತಿಗೆ ಬಂದಿದೆ. ಆಟಗಾರರ ದೈಹಿಕ ಸಾಮರ್ಥ್ಯ ಮತ್ತು ಕ್ಷಮತೆಯನ್ನು ಪರೀಕ್ಷಿಸುವ ಯೋಯೋ ಟೆಸ್ಟ್ನ ಕನಿಷ್ಠ ತೇರ್ಗಡೆ ಅಂಕವನ್ನು ಹೆಚ್ಚಿಸಲು ಮುಖ್ಯ ಕೋಚ್ ರವಿ ಶಾಸ್ತ್ರಿ ಒಲವು ತೋರಿದ್ದಾರೆ.
ಯೋಯೋ ಟೆಸ್ಟ್ ಪಾಸ್ ಮಾಡಲು ಸದ್ಯ 16.1 ಅಂಕ ಪಡೆಯಬೇಕು. ಆದರೆ, ಶಾಸ್ತ್ರಿ ಈ ಅಂಕವನ್ನು17ಕ್ಕೆ ಏರಿಕೆ ಮಾಡಲು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
![Yo-Yo test](https://etvbharatimages.akamaized.net/etvbharat/prod-images/4404766_r.jpg)
ಆಟಗಾರರು ಎಷ್ಟರ ಮಟ್ಟಿಗೆ ಚುರುಕಾಗಿದ್ದಾರೆ ಎನ್ನುವುದನ್ನು ಪರೀಕ್ಷೆ ಮಾಡುವುದಕ್ಕಾಗಿ ಯೋಯೋ ಟೆಸ್ಟ್ ಮಾಡಲಾಗುತ್ತದೆ. ಇದು ಭಾರತದಲ್ಲಿ ಮಾತ್ರ ನಡೆಯುತ್ತಿಲ್ಲ. ನ್ಯೂಜಿಲ್ಯಾಂಡ್, ಪಾಕಿಸ್ತಾನ, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ದೇಶದ ಆಟಗಾರರಿಗೂ ಈ ಪರೀಕ್ಷೆ ನಡೆಯುತ್ತದೆ. ಆಸ್ಟ್ರೇಲಿಯಾ ಯೋಯೋ ಟೆಸ್ಟ್ ಕೆಲ ವರ್ಷದಿಂದ ನಡೆಸುತ್ತಿಲ್ಲ.
ಯೋಯೋ ಟೆಸ್ಟ್ ವಿಚಾರದಲ್ಲಿ ಟೀಂ ಇಂಡಿಯಾದ ಆಟಗಾರರಲ್ಲೇ ಒಮ್ಮತವಿಲ್ಲ. ಅಷ್ಟಕ್ಕೂ ದೈಹಿಕ ಸಾಮರ್ಥ್ಯ ಸಾಬೀತಿಗೆ ಯೋಯೋ ಟೆಸ್ಟ್ ಅಂತಿಮ ಮಾನದಂಡವಲ್ಲ ಎಂದು ಆಟಗಾರರು ಈ ಹಿಂದೆ ಹೇಳಿದ್ದರು.
ಉಳಿದ ದೇಶದ ಯೋಯೋ ಟೆಸ್ಟ್ ಕನಿಷ್ಠ ಅಂಕ ಎಷ್ಟು..?
ಸದ್ಯ ಮುಖ್ಯ ಕೋಚ್ ತೀರ್ಮಾನದಂತೆ ಯೋಯೋ ಟೆಸ್ಟ್ ಪಾಸಿಂಗ್ ಅಂಕವನ್ನು ಹೆಚ್ಚಿಸಲು ನಿರ್ಧರಿಸುವ ಸಂದರ್ಭದಲ್ಲೇ ಉಳಿದ ದೇಶಗಳಲ್ಲಿ ಈ ಅಂಕ ಎಷ್ಟಿದೆ ಎನ್ನುವ ಮಾಹಿತಿ ಇಲ್ಲಿದೆ...
- ಪಾಕಿಸ್ತಾನ - 17.4
- ಶ್ರೀಲಂಕಾ - 17.4
- ದಕ್ಷಿಣ ಆಫ್ರಿಕಾ - 18.5
- ನ್ಯೂಜಿಲ್ಯಾಂಡ್ - 19
- ಇಂಗ್ಲೆಂಡ್ - 19