ಸಿಡ್ನಿ(ಆಸ್ಟ್ರೇಲಿಯಾ): ಕ್ರಿಕೆಟ್ ಜಗತ್ತಿನ ಆರಂಭದಲ್ಲಿ ಹಲವು ಏಳು-ಬೀಳುಗಳನ್ನು ಕಂಡುಂಡಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ನ ಬಲಿಷ್ಠ ಕ್ರಿಕೆಟ್ ರಾಷ್ಟ್ರಗಳಲ್ಲೊಂದು. ಆದರೆ ಈ ತಂಡಕ್ಕೆ ವಿಶ್ವಕಪ್ ಎನ್ನುವುದು ಮರೀಚಿಕೆ ಆಗುತ್ತಲೇ ಇದೆ. ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ದ.ಆಫ್ರಿಕಾಗೆ ಸಿಕ್ಕಿರುವುದು ಒಂದೇ ವಿಶ್ವಕಪ್, ಅದು 2014ರ ಅಂಡರ್ 19 ವಿಶ್ವಕಪ್.
ಕ್ರಿಕೆಟ್ನ ಬಲಿಷ್ಠ ರಾಷ್ಟ್ರಗಳಿಗೆ ಸಾಕಷ್ಟು ಬಾರಿ ಸೋಲುಣಿಸಿರುವ ಮತ್ತು ಸೋಲಿಸುವ ತಾಕತ್ತು ಹೊಂದಿರುವ ದ.ಆಫ್ರಿಕಾ ತಂಡಕ್ಕೆ ವಿಶ್ವಕಪ್ನಲ್ಲಿ ಕಳಪೆ ಪ್ರದರ್ಶನದಿಂದ ಸೋಲು ಕಂಡಿಲ್ಲ. ಆದ್ರೆ, ಅದೆಷ್ಟೋ ಬಾರಿ ತಂಡ ಅದೃಷ್ಟದ ಕೊರತೆಯಿಂದ ಸೋಲು ಕಂಡಿರುವುದೇ ಹೆಚ್ಚು. ಅದು, 2019ರ ವಿಶ್ವಕಪ್ ಒಂದನ್ನು ಬಿಟ್ಟು.
2020ರ ಮಹಿಳಾ ವಿಶ್ವಕಪ್ನ ಆರಂಭದಲ್ಲೇ ಬಲಿಷ್ಠ ಇಂಗ್ಲೆಂಡ್ಗೆ ಸೋಲಿನ ರುಚಿ ತೋರಿಸಿದ್ದ ದಕ್ಷಿಣ ಆಫ್ರಿಕಾ ನಂತರದ ಮೂರು ಪಂದ್ಯಗಳಲ್ಲಿ ಏಕಪಕ್ಷೀಯ ಗೆಲುವು ಸಾಧಿಸಿ ಸೆಮಿಫೈನಲ್ಗೆ ಎಂಟ್ರಿ ಕೊಟ್ಟಿತ್ತು. ಆದರೆ ಬುಧವಾರ ಆಸ್ಟ್ರೇಲಿಯಾ ತಂಡದ ವಿರುದ್ಧ 5 ರನ್ಗಳ ರೋಚಕ ಸೋಲುಕಂಡು ನಿರಾಶೆ ಅನುಭವಿಸಿದ ತಂಡದ ಸದಸ್ಯರು ಮೈದಾನದಲ್ಲೇ ಗಳಗಳನೆ ಅತ್ತರು.
ಅದೇ ಮಳೆ, ಅದೇ ಡಕ್ವರ್ಥ್ ಲೂಯಿಸ್ ನಿಯಮ:
ದಕ್ಷಿಣ ಆಫ್ರಿಕಾವನ್ನು ಈ ಪಂದ್ಯದಲ್ಲಿ ಸೋಲಿಸಿದ್ದು ಆಸ್ಟ್ರೇಲಿಯಾ ತಂಡ ಎನ್ನುವುದಕ್ಕಿಂತ ಮೂರು ದಶಕಗಳಿಂದ ದಕ್ಷಿಣ ಆಫ್ರಿಕಾವನ್ನು ಕಾಡುತ್ತಿರುವ ಮಳೆ ಹಾಗೂ ಡಕ್ವರ್ಥ್ ಲೂಯಿಸ್ ನಿಯಮವೆಂದೇ ಹೇಳಬೇಕು. ಟಾಸ್ ಸೋತು ಆಸ್ಟ್ರೇಲಿಯಾವನ್ನು ಬ್ಯಾಟಿಂಗ್ ಗೆ ಇಳಿಸಿದ್ದ ಹರಿಣಗಳ ಪಡೆ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಕೇವಲ 134 ರನ್ಗಳಿಗೆ ವಿರೋಧಿ ತಂಡವನ್ನು ಕಟ್ಟಿಹಾಕಿತ್ತು. ಆದರೆ ಈ ವೇಳೆ ಬಂದ ಮಳೆರಾಯ ಉಪಟಳದಿಂದಾಗಿ ಪಂದ್ಯದ ಫಲಿತಾಂಶಕ್ಕೆ ಡಿಎಲ್ ನಿಯಮದ ಮೊರೆಹೋಗಲೇ ಬೇಕಾಯಿತು.
ಒಂದು ವೇಳೆ ಮಳೆಗೆ ಪಂದ್ಯ ರದ್ದಾಗಿದ್ದರೆ, ದಕ್ಷಿಣ ಆಫ್ರಿಕಾ ತಂಡ ನೇರ ಫೈನಲ್ ಪ್ರವೇಶ ಪಡೆಯುತ್ತಿತ್ತು. ದುರಾದೃಷ್ಟ ನೋಡಿ. ಮಳೆ ಕೇವಲ ಅರ್ಧಗಂಟೆಗೆ ನಿಂತು ಹೋಯಿತು! ಪಂದ್ಯವನ್ನು 13 ಓವರ್ಗಳಿಗೆ ಸೀಮಿತಗೊಳಿಸಿ 98 ರನ್ಗಳ ಟಾರ್ಗೆಟ್ ನೀಡಲಾಯಿತು. ಈ ಮೊತ್ತ ಬೆನ್ನತ್ತಿದ ನೀಕರ್ಕ್ ಪಡೆ 92 ರನ್ಗಳಿಸಲಷ್ಟೇ ಶಕ್ತವಾಗಿ 5 ರನ್ಗಳ ಸೋಲು ಕಂಡಿತು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಮಳೆ ಮುಳುವಾಗಿ, ಇಲ್ಲಿಯವರೆಗೆ ಪುರುಷರನ್ನು ಕಾಡಿದ್ದ ಚೋಕರ್ಸ್ ಪಟ್ಟ ಮಹಿಳೆಯರಿಗೂ ಸಿಕ್ಕಂತಾಯಿತು.
ಹರಿಣಗಳಿಗೆ ಡಕ್ವರ್ಥ್ ಲೂಯಿಸ್ ನಿಯಮ ವಿಲನ್:
ನಿಷೇಧದ ಬಳಿಕ ಕ್ರಿಕೆಟ್ಗೆ ದಕ್ಷಿಣ ಆಫ್ರಿಕಾ 1992ರ ವಿಶ್ವಕಪ್ನಲ್ಲಿ ಮತ್ತೆ ಮೈದಾನದಲ್ಲಿ ಕಾಣಿಸಿಕೊಂಡಿತ್ತು. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಆಫ್ರಿಕಾ ತಂಡ ಸೆಮೀಸ್ ಪ್ರವೇಶಿಸಿತ್ತು. ಸೆಮಿಯಲ್ಲಿ ಇಂಗ್ಲೆಂಡ್ ತಂಡ ನೀಡಿದ 252 ರನ್ಗಳ ಗುರಿಯನ್ನು ಬೆನ್ನತ್ತುತ್ತಿದ್ದ ವೇಳೆ ಮಳೆರಾಯ ಎಂಟ್ರಿ ಕೊಟ್ಟಿದ್ದ. ಆಮೇಲೆ ನಡೆದಿದ್ದು ವಿಶ್ವಕಪ್ ಇತಿಹಾಸ ಅತ್ಯಂತ ಕೆಟ್ಟ ಕ್ಲೈಮ್ಯಾಕ್ಸ್!
ಆ ಕಾಲದಲ್ಲಿ ಮಳೆ ಬಂದಾಗ ಪಂದ್ಯವನ್ನು ನಿಲ್ಲಿಸುವ ಅವಕಾಶವಿರಲಿಲ್ಲ. ಟೆಲಿವಿಷನ್ ನಿಯಮದಂತೆ ಪಂದ್ಯ ನಿಲ್ಲಿಸಿ ಮಳೆ ನಿಲ್ಲುವವರೆಗೆ ಕಾಯುವಂತಿರಲಿಲ್ಲ. ಹೀಗಾಗಿ ಅಂಪೈರ್ ಓವರ್ ಕಡಿತ ಮಾಡಲು ನಿರ್ಧರಿಸುತ್ತಿದ್ದರು. 13 ಎಸೆತಕ್ಕೆ 22 ರನ್ ಬೇಕಿದ್ದ ಪಂದ್ಯ ಡಕ್ವರ್ತ್ ಲೂಯಿಸ್ ನಿಯಮದಲ್ಲಿ ಕಡಿತಗೊಂಡಾಗ ಆಗಿದ್ದು ಒಂದು ಎಸೆತಕ್ಕೆ 22 ರನ್! ಪಂದ್ಯ ಕೊನೆಗೊಂಡಾಗ ಕೇಳಿಬಂದಿದ್ದು ಚೋಕರ್ಸ್ ಎನ್ನುವ ಕೂಗು. ಈ ಕೂಗು ನಂತರದ ಬಹುತೇಕ ವಿಶ್ವಕಪ್ ಟೂರ್ನಿಯಲ್ಲಿ ಆಗಾಗ ಪುನರಾವರ್ತನೆಯಾಗುತ್ತಲೇ ಬರುತ್ತಿದೆ.
ಈ ಪಂದ್ಯದ ಬಳಿಕ ಡಕ್ವರ್ತ್ ಲೂಯಿಸ್ ನಿಯಮದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯಿತು. ನಿಯಮವನ್ನು ಸರಳಗೊಳಿಸುವಂತೆ ಸಾಕಷ್ಟು ಒತ್ತಾಯ ಕೇಳಿ ಬಂದಿತ್ತು. ಆದರೂ ಈ ನಿಯಮ ಇಂದಿಗೂ ಅದೆಷ್ಟೋ ಕ್ರಿಕೆಟಿಗರಿಗೆ ಹಾಗೂ ಕ್ರಿಕೆಟ್ ಫ್ಯಾನ್ಸ್ಗೆ ಅರ್ಥವಾಗದೆ ಕಗ್ಗಂಟಾಗಿಯೇ ಉಳಿದಿದೆ.
ರನ್ಔಟ್ನಿಂದ ಮತ್ತೆ ಚೋಕರ್ಸ್ ಪಟ್ಟ:
1999ರ ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ಮತ್ತೆ ಸೆಮೀಸ್ಗೆ ಲಗ್ಗೆ ಇಟ್ಟಿತ್ತು. ಬಲಿಷ್ಠ ಆಸ್ಟ್ರೇಲಿಯಾದ ವಿರುದ್ಧ ಆಫ್ರಿಕನ್ನರು ಉಪಾಂತ್ಯಕ್ಕಾಗಿ ಸೆಣಸಾಟ ನಡೆಸಿದ್ದರು. ಈ ಬಾರಿಯ ಸೆಮಿಫೈನಲ್ನಲ್ಲಿ ಆಫ್ರಿಕನ್ನರಿಗೆ 214 ರನ್ಗಳ ಗುರಿ ನೀಡಲಾಗಿತ್ತು. ಮೈಕೆಲ್ ಬೆವನ್ 65 ರನ್ ಸಿಡಿಸಿದ್ದರೆ, ಅತ್ತ ಶಾನ್ ಪೊಲಾಕ್ 36 ರನ್ ನೀಡಿ 5 ವಿಕೆಟ್ ಕಿತ್ತಿದ್ದರು.
214 ರನ್ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾಗೆ ಕೊನೆಯ ಓವರ್ನಲ್ಲಿ 9 ರನ್ಗಳ ಅಗತ್ಯವಿರುತ್ತದೆ. ದಕ್ಷಿಣ ಆಫ್ರಿಕಾ ಕೈಯಲ್ಲಿದ್ದಿದ್ದು ಕೊನೆಯ ವಿಕೆಟ್. ಉತ್ತಮವಾಗಿ ಆಡುತ್ತಿದ್ದ ಕ್ಲೂಸ್ನರ್ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸುತ್ತಾರೆ. ಎರಡನೇ ಎಸೆತಕ್ಕೆ ಹೊಡೆದ ಚೆಂಡು ಬೌಂಡರಿ ಗೆರೆ ದಾಟಿತ್ತು. ನಾಲ್ಕು ಎಸೆತದಲ್ಲಿ ಬೇಕಿದ್ದಿದ್ದು ಕೇವಲ ಒಂದು ರನ್. ಆದರೂ ಆಫ್ರಿಕನ್ನರ ವಿಶ್ವಕಪ್ ಪ್ರಯಾಣ ಇಲ್ಲೇ ಅಂತ್ಯವಾಗಿತ್ತು.
ಮೂರನೇ ಎಸೆತದಲ್ಲಿ ಯಾವುದೇ ರನ್ ಬರುವುದಿಲ್ಲ. ನಾಲ್ಕನೇ ಎಸೆತದಲ್ಲಿ ವಿಕೆಟ್ ನೇರಕ್ಕೆ ಬಾರಿಸುವ ಕ್ಲೂಸ್ನರ್ ಗೆಲುವಿನ ಓಟ ಕದಿಯುವ ಪ್ರಯತ್ನ ಮಾಡುತ್ತಾರೆ. ನಾನ್ ಸ್ಟ್ರೈಕ್ನಲ್ಲಿದ್ದ ಅಲನ್ ಡೊನಾಲ್ಡ್ ಕೊಂಚ ನಿಧಾನವಾಗಿ ಓಟ ಪ್ರಾರಂಭಿಸಿ ರನ್ ಔಟಾಗುತ್ತಾರೆ. ಪಂದ್ಯ ಟೈನಲ್ಲಿ ಅಂತ್ಯ ಕಂಡರೂ ಹಿಂದಿನ ಪಂದ್ಯ ಗೆದ್ದಿದ್ದರಿಂದ ಆಸ್ಟ್ರೇಲಿಯಾ ಉಪಾಂತ್ಯ ಪ್ರವೇಶಿಸುತ್ತದೆ.
ಮಳೆ ಮತ್ತು ಡಕ್ವರ್ತ್ ಎನ್ನುವ ಬೆಂಬಿಡದ ಭೂತ:
2003ರ ವಿಶ್ವಕಪ್ನಲ್ಲಿ ಸೂಪರ್ ಸಿಕ್ಸ್ ಹಂತಕ್ಕೇರಲು ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ ಮಳೆರಾಯ ಸೋಲಿನ ರೂಪದಲ್ಲಿ ಎಂಟ್ರಿ ನೀಡಿದ್ದ. ಶ್ರೀಲಂಕಾ ನೀಡಿದ್ದ 269 ರನ್ಗಳ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ 6 ವಿಕೆಟ್ಗೆ 229 ರನ್ ಗಳಿಸಿದ್ದಾಗ ಮಳೆ ಆರಂಭವಾಗಿತ್ತು.
ಡಕ್ವರ್ತ್ ಲೂಯಿಸ್ ನಿಯಮವನ್ನು ಸಮೀಕರಿಸಿದಾಗ ಪಂದ್ಯವನ್ನು ಟೈ ಎಂದು ಘೋಷಿಸಲಾಯಿತು. ನಿಯಮದ ಪ್ರಕಾರ, ದಕ್ಷಿಣ ಆಫ್ರಿಕಾಗೆ ಒಂದು ರನ್ ಗಳಿಸಿದ್ದರೆ ಗೆಲ್ಲಬಹುದಿತ್ತು. ಕೊನೆಯ ಎಸೆತ ಎದುರಿಸಿದ್ದ ಮಾರ್ಕ್ ಬೌಚರ್ ಯಾವುದೇ ರನ್ ಗಳಿಸಿರಲಿಲ್ಲ.
ತವರು ಹುಡುಗನಿಂದಲೇ ಚೂರಾಯ್ತು ವಿಶ್ವಕಪ್ ಕನಸು!
2015ರ ವಿಶ್ವಕಪ್ ಸೆಮಿ ಫೈನಲ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 281 ರನ್ ಗಳಿಸಿ ಉತ್ತಮ ಮೊತ್ತ ಕಲೆಹಾಕಿತ್ತು. ಮಳೆಯ ಕಾರಣದಿಂದ ಪಂದ್ಯವನ್ನು 43 ಓವರ್ಗೆ ಸೀಮಿತಗೊಳಿಸಲಾಗಿತ್ತು.
ಡಕ್ವರ್ತ್ ನಿಯಮದಂತೆ ಕಿವೀಸ್ಗೆ 298 ರನ್ಗಳ ಟಾರ್ಗೆಟ್ ನೀಡಲಾಗಿತ್ತು. ಕೊನೆಯ ಓವರ್ನಲ್ಲಿ ಕಷ್ಟಸಾಧ್ಯವಾದ 12 ರನ್ ಅಗತ್ಯವಿತ್ತು. ಡೇಲ್ ಸ್ಟೇನ್ ಕೊನೆಯ ಓವರ್ ಎಸೆಯಲು ಸಿದ್ಧರಾಗಿದ್ದರು. ಉತ್ತಮವಾಗಿ ಆಡುತ್ತಿದ್ದ ಗ್ರ್ಯಾಂಟ್ ಎಲಿಯಟ್ ಮೊದಲ ನಾಲ್ಕು ಎಸೆತದಲ್ಲಿ ಏಳು ರನ್ ಕದಿಯುತ್ತಾರೆ. ಐದನೇ ಎಸೆತದಲ್ಲಿ ಎಲಿಯಟ್ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಕಿವೀಸ್ ಫೈನಲ್ ಗೆ ಎಂಟ್ರಿ ಪಡೆಯುತ್ತದೆ. ವಿಶೇಷವೆಂದರೆ, ಇದೇ ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಗ್ರಾಂಟ್ ಎಲಿಯಟ್ ತವರು ತಂಡಕ್ಕೆ ಕೊನೆಯಲ್ಲಿ ವಿಲನ್ ಆಗಿದ್ದು ನಿಜಕ್ಕೂ ಆ ದೇಶಕ್ಕೆ ಅರಗಿಸಿಕೊಳ್ಳಲಾಗದ ನೋವೇ ಸರಿ!
ಇದೆಲ್ಲಾ 3 ದಶಕಗಳಿಂದ ಪುರುಷರ ಕ್ರಿಕೆಟ್ಗೆ ಮಾತ್ರ ಸೀಮಿತವಾಗಿತ್ತು. ಆದರೆ ಇಂದಿನ ಪಂದ್ಯದಲ್ಲಿ ಮಳೆ, ಡಕ್ವರ್ಥ್ ಲೂಯಿಸ್ ನಿಯಮ ಎಂಬ ಭೂತ ಮಹಿಳೆಯರ ಚೊಚ್ಚಲ ವಿಶ್ವಕಪ್ ಕನಸನ್ನು ನುಚ್ಚು ನೂರು ಮಾಡಿತು. ಇದೆಂಥಾ ದುರಂತ ನೋಡಿ!