ಮೆಲ್ಬೋರ್ನ್: ಐಸಿಸಿ ಟಿ-20 ಮಹಿಳಾ ಫೈನಲ್ ಪಂದ್ಯ ನಾಳೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದ್ದು, ಚೊಚ್ಚಲ ಸಲ ಫೈನಲ್ ಪ್ರವೇಶ ಪಡೆದುಕೊಂಡಿರುವ ಟೀಂ ಇಂಡಿಯಾ ಹಾಗೂ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಸೆಣಸಾಟ ನಡೆಸಿವೆ.
ಸೆಮಿಫೈನಲ್ನಲ್ಲಿ ಇಂಗ್ಲೆಂಡ್- ಭಾರತ ತಂಡ ಮುಖಾಮುಖಿಯಾಗಿದ್ದವು. ಆದರೆ, ಮಳೆ ಸುರಿದ ಕಾರಣ ಪಂದ್ಯ ರದ್ದುಗೊಂಡಿದ್ದು, ಲೀಗ್ ಹಂತದಲ್ಲಿ ಎಲ್ಲ ಪಂದ್ಯ ಗೆದ್ದಿರುವ ಹರ್ಮನ್ ಪ್ರೀತ್ ಕೌರ್ ಪಡೆ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ. ಇದರ ಮಧ್ಯೆ ಆಸ್ಟ್ರೇಲಿಯಾ - ದಕ್ಷಿಣ ಆಫ್ರಿಕಾ ನಡುವಿನ ಸೆಮಿಫೈನಲ್ ಪಂದ್ಯಕ್ಕೂ ಮಳೆ ಕಾಡಿದ ಕಾರಣ ಡಕ್ವರ್ಥ್ ನಿಯಮದ ಪ್ರಕಾರ ಕಾಂಗರೂ ಪಡೆ 5ರನ್ಗಳ ಗೆಲುವು ದಾಖಲು ಮಾಡಿ ಫೈನಲ್ ಪ್ರವೇಶ ಪಡೆದಿದೆ.
ಇದೀಗ ನಾಳೆ ನಡೆಯುವ ಪಂದ್ಯಕ್ಕೆ ಒಂದು ವೇಳೆ ಮಳೆಯ ಕಾಟ ಎದುರಾದರೆ ಮೀಸಲು ದಿನ ಸೋಮವಾರ ಫೈನಲ್ ಪಂದ್ಯ ನಡೆಯಲಿದೆ. ಒಂದು ವೇಳೆ ಆ ದಿನವೂ ಮಳೆ ಸುರಿದರೆ ಎರಡು ತಂಡಗಳು ಪ್ರಶಸ್ತಿ ಹಂಚಿಕೊಳ್ಳಲಿವೆ. ನಾಳೆ ನಡೆಯುವ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಪಡೆ ಗೆಲುವು ಸಾಧಿಸಿದರೆ ಇತಿಹಾಸ ರಚನೆಯಾಗಲಿದ್ದು, ಚೊಚ್ಚಲ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದಂತೆ ಆಗುತ್ತದೆ. ಆದರೆ, ಎದುರಾಳಿ ತಂಡ ಕಳೇದ ಸಲವೂ ಚಾಂಪಿಯನ್ ಆಗಿ ಹೊರಹೊಮ್ಮಿರುವ ಕಾರಣ ಬಲಿಷ್ಠ ತಂಡಗಳ ನಡುವೆ ಪೈಪೋಟಿ ನಡೆಯುವುದು ಮಾತ್ರ ಸುಳ್ಳಲ್ಲ.