ಸಿಡ್ನಿ(ಆಸ್ಟ್ರೇಲಿಯಾ): ಮಹಿಳಾ ಟಿ-20 ವಿಶ್ವಕಪ್ನಲ್ಲಿ ಆಡಿರುವ ಎಲ್ಲಾ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಿರುವ ಭಾರತ ತಂಡ ಖಂಡಿತಾ ಫೈನಲ್ ತಲುಪಲಿದೆ ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ವಿಶ್ವಕಪ್ನಲ್ಲಿ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು 17 ರನ್ಗಳಿಂದ, ಬಾಂಗ್ಲಾದೇಶದ ವಿರುದ್ಧ 18 ರನ್, ನ್ಯೂಜಿಲ್ಯಾಂಡ್ ವಿರುದ್ಧ 3 ರನ್ ಹಾಗೂ ಶ್ರೀಲಂಕಾ ವಿರುದ್ಧ 7 ವಿಕೆಟ್ಗಳಿಂದ ಗೆದ್ದು ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದೆ.
ಟೀಂ ಇಂಡಿಯಾ ಯುವ ಆಟಗಾರ್ತಿ ಶಫಾಲಿ ವರ್ಮಾ ಆಟದ ಬಗ್ಗೆಯೂ ಬ್ರೆಟ್ ಲೀ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಟೀಂ ಇಂಡಿಯಾದ ಅಗ್ರ ಕ್ರಮಾಂಕದಲ್ಲಿ ಶಫಾಲಿ ಅದ್ಭುತವಾಗಿ ಆಡುತ್ತಿದ್ದಾರೆ. ಭಯರಹಿತವಾಗಿ ಆಡುವ ಶಫಾಲಿ ಟೀಂ ಇಂಡಿಯಾಗೆ ಶಕ್ತಿಯನ್ನು ತುಂಬುತ್ತಾರೆ. ಆಕೆಯ ಆಟ ನೋಡಲು ಸೊಗಸು ಎಂದಿದ್ದಾರೆ ಬ್ರೆಟ್ ಲೀ.
ಭಾರತ ತಂಡ ಇಲ್ಲಿಯವರೆಗೆ ಟಿ-20 ವಿಶ್ವಕಪ್ನಲ್ಲಿ ಫೈನಲ್ ಪ್ರವೇಶಿಸಿಲ್ಲ. ಆದರೆ ಈ ಬಾರಿ ಖಂಡಿತಾ ಫೈನಲ್ ತಲುಪಲಿದೆ. ಈ ಹಿಂದಿನ ತಂಡಕ್ಕಿಂತ ಈಗಿರುವ ಭಾರತ ತಂಡ ಅದ್ಭುತವಾಗಿದೆ. ಶಫಾಲಿ ವರ್ಮಾ, ಪೂನಮ್ ಯಾದವ್ರಂತಹ ಮ್ಯಾಚ್ ವಿನ್ನರ್ಗಳು ತಂಡದಲ್ಲಿದ್ದಾರೆ ಎಂದು ಬ್ರೆಟ್ ಲೀ ಹೇಳಿದ್ದಾರೆ.
ಟೂರ್ನಿಯಲ್ಲಿ ಸೋಲೇ ಕಾಣದ ಭಾರತ ತಂಡವನ್ನು ಸೆಮಿಫೈನಲ್ನಲ್ಲಿ ಮಣಿಸಬೇಕೆಂದರೆ ಎದುರಾಳಿ ಹೆಚ್ಚಿನ ಪ್ರಯತ್ನ ಹಾಕಲೇಬೇಕು. ಹಾಗಾದರೆ ಮಾತ್ರ ಭಾರತವನ್ನು ತಡೆಯಬಹುದು ಎಂದಿದ್ದಾರೆ.
ಇನ್ನು ಟೂರ್ನಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿ 47, 46, 39, 29 ರನ್ ಗಳಿಸಿ ಅಬ್ಬರಿಸುತ್ತಿರುವ ಆರಂಭಿಕ ಬ್ಯಾಟರ್ ಶಫಾಲಿ ಬಗ್ಗೆ ಮಾತನಾಡಿರುವ ಬ್ರೆಟ್ ಲೀ, "ಶಫಾಲಿ ಅದ್ಭುತ ಆರಂಭಿಕ ಆಟಗಾರ್ತಿಯಾಗಿದ್ದಾರೆ. ಎದರಾಳಿ ಬೌಲರ್ಗಳನ್ನು ಚಿಂತೆಗೀಡು ಮಾಡುವ ಅವರ ಆಟವನ್ನು ನೋಡಲು ತುಂಬಾ ಖುಷಿಯಾಗುತ್ತದೆ" ಎಂದಿದ್ದಾರೆ.