ಬ್ರಿಸ್ಬೇನ್: ಭಾರತ ತಂಡದ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ರಿಷಭ್ ಅವರೊಂದಿಗಿನ ಕಾಳಗಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ ಎಂದು ಆಸೀಸ್ ಸ್ಪಿನ್ನರ್ ನಾಥನ್ ಲಿಯಾನ್ ತಿಳಿಸಿದ್ದಾರೆ.
ಪ್ರಸ್ತುತ ಬಾರ್ಡರ್ ಗವಾಸ್ಕರ್ ಟ್ರೋಫಿಯ 4ನೇ ಪಂದ್ಯ ನಾಥನ್ ಲಿಯಾನ್ ಪಾಲಿನ 100ನೇ ಟೆಸ್ಟ್ ಪಂದ್ಯವಾಗಿದೆ. ಸರಣಿ ನಿರ್ಣಾಯಕವಾದ ಈ ಮಹತ್ವದ ಪಂದ್ಯದಲ್ಲಿ ಲಿಯಾನ್ ತಮ್ಮ 397ನೇ ವಿಕೆಟ್ ಆಗಿ ಭಾರತದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದರು.
"ಈದಿನ ಮತ್ತು ನಿನ್ನೆ 3ನೇ ದಿನದ ವಿಕೆಟ್ನಂತೆಯೇ ಇತ್ತು. ಆಫ್ ಸ್ಟಂಪ್ನ ಹೊರಗೆ ಉತ್ತಮ ಬಿರುಕಿದ್ದು, ನಾನು ಅದನ್ನು ಗುರಿಯಾಗಿಸಿ ಬೌಲಿಂಗ್ ಮಾಡಲು ಪ್ರಯತ್ನಿಸುತ್ತಿದ್ದೇನೆ. ನನ್ನ ನೈಸರ್ಗಿಕ ಬೌಲಿಂಗ್ ಪೇನ್ನ ಬಲಗೈ ಗ್ಲೌಸ್ ಆಗಿದ್ದು, ಅದು ಆಫ್ ಸ್ಟಂಪ್ನ ಹೊರಗೆ ಒಂದು ಅಡಿಯಲ್ಲಿದೆ. ಪಿಚ್ನಲ್ಲಿ ಸ್ವಲ್ಪ ಬಿರುಕಿರುವುದು ನನಗೆ ಸಂತೋಷವಾಗಿದೆ. ಇದರಿಂದ ನನಗೇನಾದರೂ ಅನುಕೂಲವಾಗಬಹುದು ಎಂಬ ಆಶಾವಾದದಲ್ಲಿದ್ದೇನೆ" ಎಂದು ಲಿಯಾನ್ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮೂರನೇ ಟೆಸ್ಟ್ನಲ್ಲಿ ಸಿಕ್ಕ ಒಂದೆರಡು ಜೀವದಾನಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಬೌಲಿಂಗ್ಗೆ ಹಿಗ್ಗಾಮುಗ್ಗ ಬಾರಿಸಿದ್ದ ರಿಷಭ್ ಪಂತ್ ಬಗ್ಗೆಯೂ ಮಾತನಾಡಿದ್ದು ಅವರ ಜೊತೆಗಿನ ಹೋರಾಟಕ್ಕಾಗಿ ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.
"ರಿಷಭ್ ಯಾವಾಗಲೂ ನನ್ನ ಬೌಲಿಂಗ್ ದಂಡಿಸಲು ಪ್ರಯತ್ನಿಸುತ್ತಾರೆ, ಅವರಿಗೆ ಬೌಲಿಂಗ್ ಮಾಡುವುದಕ್ಕೆ ಕಾಯುತ್ತಿದ್ದೇನೆ. ಅವರೊಂದಿಗಿನ ಕಾದಾಟ ನಿಜಕ್ಕೂ ಅದ್ಭುತವಾಗಿರುತ್ತದೆ." ಎಂದು ಲಿಯಾನ್ ಹೇಳಿದ್ದಾರೆ.
ಇದನ್ನು ಓದಿ:ಅನಗತ್ಯ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದ ರೋಹಿತ್: ಸುನೀಲ್ ಗವಾಸ್ಕರ್ ಆಕ್ರೋಶ