ಮೆಲ್ಬೋರ್ನ್: ಗಾಯದಿಂದ ಚೇತರಿಸಿಕೊಂಡು ಆಸ್ಟ್ರೇಲಿಯಾಕ್ಕೆ ತೆರಳಿದ್ದ ರೋಹಿತ್ ಶರ್ಮಾ ಸಿಡ್ನಿಯಲ್ಲಿ ಕ್ವಾರಂಟೈನ್ ಮುಗಿಸಿ ತಂಡ ಸೇರ್ಪಡೆಗೊಂಡಿದ್ದಾರೆ. ಆದರೆ ತಂಡ ಸೇರಿಕೊಂಡ ಮಾರನೆಯ ದಿನವೇ ಅವರು ಟೂರ್ನಿಯ ಉಳಿದೆರೆಡು ಟೆಸ್ಟ್ ತಂಡಕ್ಕೆ ಉಪನಾಯಕನಾಗಿ ನೇಮಕಗೊಂಡಿದ್ದಾರೆ.
ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹಾಗಾಗಿ ತಂಡದ ಉಪನಾಯಕ ಪಟ್ಟವನ್ನು ಅನುಭವಿ ಚೇತೇಶ್ವರ್ ಪೂಜಾರಗೆ ನೀಡಲಾಗಿತ್ತು. ಆದರೆ ರೋಹಿತ್ ಆಗಮಿಸುತ್ತಿದ್ದಂತೆ 79 ಟೆಸ್ಟ್ ಪಂದ್ಯಗಳನಾಡಿರುವ ಪೂಜಾರ ಅವರನ್ನು ಉಪನಾಯಕತ್ವದಿಂದ ಕೆಳಗಿಳಿಸಲಾಗಿದೆ. ಈ ವಿಚಾರ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಉಂಟುಮಾಡಿದೆ. ಏಕೆಂದರೆ ರೋಹಿತ್ ಭಾರತದ ಪರ ಆಡಿದ ಟೆಸ್ಟ್ ಪಂದ್ಯಗಳು 32.!
"ವಿರಾಟ್ ಕೊಹ್ಲಿ ಪಿತೃತ್ವ ವಿರಾಮ ತೆಗೆದುಕೊಂಡ ನಂತರ ಮತ್ತು ಅಜಿಂಕ್ಯ ರಹಾನೆಯನ್ನು ನಾಯಕನಾಗಿ ನೇಮಿಸಲಾಗಿದೆ. ಬಳಿಕ ಭಾರತದ ಉಪನಾಯಕ ಯಾರು? ಎಂಬ ಅನುಮಾನ ಎಂದಿಗೂ ಇರಲಿಲ್ಲ. ಏಕೆಂದರೆ ಆ ಸ್ಥಾನದಲ್ಲಿ ರೋಹಿತ್ ಇರುತ್ತಾರೆ. ಪೂಜಾರ ನಮ್ಮ ತಾತ್ಕಾಲಿಕ ವ್ಯವಸ್ಥೆ ಹಾಗೂ ರೋಹಿತ್ ಆಗಮಿಸುವವರೆಗೆ ಮಾತ್ರ ಉಪನಾಯಕನನ್ನಾಗಿ ನೇಮಿಸಲಾಗಿತ್ತು. ರೋಹಿತ್ ಭಾರತದ ಸೀಮಿತ್ ಓವರ್ಗಳ ತಂಡಕ್ಕೆ ದೀರ್ಘಕಾಲದ ಉಪನಾಯಕನಾಗಿದ್ದಾರೆ. ಆದ್ದರಿಂದ ವಿರಾಟ್ ಅನುಪಸ್ಥಿತಿಯಲ್ಲಿ ಅವರು ತಂಡದ ನಾಯಕತ್ವ ಗುಂಪಿನ ಭಾಗವಾಗಬೇಕಿತ್ತು" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ನಾಯಕತ್ವದಲ್ಲಿ ರೋಹಿತ್ ದಾಖಲೆ
ರೋಹಿತ್ ಈಗಾಗಲೇ ವಿರಾಟ್ಗೆ ಬೆಂಬಲವಾಗಿ ಏಕದಿನ ಮತ್ತು ಟಿ20 ತಂಡದ ಉಪನಾಯಕ ಜವಾಬ್ದಾರಿ ನಿರ್ವಹಿಸಿದ್ದಾರೆ. ಅಲ್ಲದೆ 10 ಏಕದಿನ ಮತ್ತು 19 ಟಿ20 ಪಂದ್ಯಗಳನ್ನು ಮುನ್ನಡೆಸಿದ್ದು, ಅದರಲ್ಲಿ 8 ಏಕದಿನ ಮತ್ತು 15 ಟಿ20 ಪಂದ್ಯಗಳಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದಾರೆ.
ಐಪಿಎಲ್ನಲ್ಲಿ ಅತ್ಯಂತ ಯಶಸ್ವಿ ನಾಯಕ ಎಂಬ ಖ್ಯಾತಿಯು ಹಿಟ್ಮ್ಯಾನ್ ಹೆಸರಿನಲ್ಲಿದೆ. ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕನಾಗಿರುವ 8 ಆವೃತ್ತಿಗಳಲ್ಲಿ 5 ಬಾರಿ ಟ್ರೋಫಿ ತಂದುಕೊಟ್ಟಿದ್ದಾರೆ.