ಮುಂಬೈ: ಟೀಂ ಇಂಡಿಯಾ ಆಯ್ಕೆ ಸಮಿತಿ ಮೊದಲಿಗೆ ಕೆ.ಎಲ್.ರಾಹುಲ್ ಅವರನ್ನ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಸಲುವಾಗಿ ಆಯ್ಕೆ ಮಾಡಿತ್ತು. ಯಾವಾಗ ಓಪನರ್ ಶಿಖರ್ ಧವನ್ ಗಾಯಗೊಂಡು ಹೊರ ಬಿದ್ದರೋ ಆಗ ಆಯ್ಕೆದಾರರು ಕೆ.ಎಲ್.ರಾಹುಲ್ಗೆ ಬಡ್ತಿ ಕೊಟ್ಟು ಒಪನರ್ ಆಗಿ ಆಯ್ಕೆ ಮಾಡಲಾಗಿತ್ತು.
ಅತ್ಯಂತ ಪ್ರಮುಖ ಪಂದ್ಯದಲ್ಲಿ ಆಲ್ರೌಂಡರ್ ವಿಜಯ್ ಶಂಕರ್ಗೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಅವಕಾಶ ಕಲ್ಪಿಸಲಾಯಿತು. ವಿಜಯ್ ಶಂಕರ್ ಸಹ ಗಾಯಗೊಂಡು ಟೂರ್ನಿಯಿಂದ ಹೊರ ಬಿದ್ದರು. ಆಗ ಅವರ ಸ್ಥಾನಕ್ಕೆ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನ ಆಯ್ಕೆ ಮಾಡಲಾಯಿತು. ಆಯ್ಕೆ ಸಮಿತಿಯ ಈ ನಿರ್ಧಾರ ಈಗ ಬಿಸಿಸಿಐ ಮುಂದೆ ಬರಲಿದ್ದು, ಆಯ್ಕೆ ಸಮಿತಿ ಎಲ್ಲದಕ್ಕೂ ವಿವರಣೆ ನೀಡಬೇಕೆಂಬ ಮಾತು ಕೇಳಿಬರುತ್ತಿದೆ.
ಈ ಸಂಬಂಧ ಮಾತನಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ಸೋಲಿಗೆ ಕೇವಲ ಆಟಗಾರರನ್ನು ಮಾತ್ರ ದೂರಲಾಗುತ್ತಿದೆ. ಸೋಲಿಗೆ ಕೇವಲ ಆಟಗಾರರು ಮಾತ್ರ ಅಲ್ಲ, ಆಯ್ಕೆ ಸಮಿತಿಯೂ ನೇರ ಹೊಣೆಯಾಗುತ್ತದೆ. ತಂಡ ಸಿರೀಸ್ಗಳನ್ನ ಗೆದ್ದಾಗ ಎಲ್ಲರಿಗೂ ನಗದು ಬಹುಮಾನ ದೊರೆಯುತ್ತದೆ. ಆಗ ಸೆಲೆಕ್ಟರ್ಸ್ಗಳಿಂದ ಹಿಡಿದು ತಂಡದ ಗೆಲುವಿಗೆ ಕಾರಣರಾದ ಎಲ್ಲರಿಗೂ ಬಹುಮಾನ ನೀಡಲಾಗುತ್ತದೆ. ಹಾಗೆಯೇ ಸೋಲಿನ ಹೊಣೆಯೂ ಎಲ್ಲರದ್ದಾಗಿರುತ್ತದೆ. ಈ ಸೋಲಿಗೆ ಸೆಲೆಕ್ಟರ್ಗಳು ಸಹ ಹೊಣೆಗಾರರು ಎಂದಿದ್ದಾರೆ.
ಈ ಮಾತುಗಳು ಈಗ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ಕೆ ಪ್ರಸಾದ್, ದೇವಾಂಗ್ ಗಾಂಧಿ, ಗಗನ್ ಖೋಡಾ, ಜತಿನ್ ಪರಾಂಜಪೆ ಮತ್ತು ಸರಣ್ದೀಪ್ ಸಿಂಗ್ ಅವರನ್ನೇ ಗುರಿಯಾಗಿಸಿಕೊಂಡಿರುವುದನ್ನ ತೋರಿಸುತ್ತಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಸೆಮಿಫೈನಲ್ ಸೋಲು ಬಿಸಿಸಿಐ, ಆಯ್ಕೆ ಸಮಿತಿ ಹಾಗೂ ತಂಡದಲ್ಲಿನ ಹುಳುಕುಗಳನ್ನ ಒಂದೊಂದಾಗಿಯೇ ಹೊರ ಹಾಕುತ್ತಿದೆ.
ವಿಶ್ವಕಪ್ಗೆ 15 ಮಂದಿ ಪ್ರೈಮರಿ ಟೀಂ ಆಯ್ಕೆ ಮಾಡಿದಾಗಲೇ ಆಯ್ಕೆ ಸಮಿತಿ ವಿರುದ್ಧ ಅನಾನುಭವಿಗಳು ಎಂಬ ಕೂಗು ಕೇಳಿ ಬಂದಿತ್ತು. ಅದರಲ್ಲೂ ರಾಯುಡುರನ್ನು ಕೈ ಬಿಟ್ಟಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಆಯ್ಕೆ ಸಮಿತಿಗೆ ಸೆಮಿಫೈನಲ್ನ ಸೋಲು ತಲೆನೋವು ತರಿಸಿದೆ.