ಲಂಡನ್: ಇಂಗ್ಲೆಂಡ್ ವಿರುದ್ಧ ಮುಂಬರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ನಾಲ್ಕು ದಿನಗಳ ಪಂದ್ಯ ಪರಿಗಣಿಸಬೇಕೆಂದು ಬ್ಯಾಟಿಂಗ್ ದಿಗ್ಗಜ ಬ್ರಿಯಾನ್ ಲಾರಾ ವಿಂಡೀಸ್ ತಂಡಕ್ಕೆ ಕಿವಿಮಾತು ಹೇಳಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ 5 ದಿನ ಆಡುವಂತಹ ಸಾಮರ್ಥ್ಯವನ್ನು ತಂಡ ಹೊಂದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್ನಿಂದ ದೀರ್ಘ ವಿರಾಮದ ನಂತರ ಸೌತಂಪ್ಟನ್ನಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿ ಬಯೋಸೆಕ್ಯೂರ್ ತಾಣದಲ್ಲಿ ಜುಲೈ 8ರಿಂದ ಆರಂಭವಾಗುವ ಮೂಲಕ ವಿಶ್ವ ಕ್ರಿಕೆಟ್ಗೆ ಮರುಚಾಲನೆ ಸಿಗುತ್ತಿದೆ.
ಅವರು (ವಿಂಡೀಸ್) ತಕ್ಷಣವೇ ಪುಟಿದೇಳಲು ಸಮರ್ಥರಾಗಬೇಕು. ಏಕೆಂದರೆ ಇಂಗ್ಲೆಂಡ್ ತಂಡವನ್ನು ತವರಿನಲ್ಲಿ ಸುಲಭವಾಗಿ ಸೋಲಿಸಲು ಸಾಧ್ಯವಿಲ್ಲ. ಅವರು ಅವರ ನೆಲದಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿದ್ದಾರೆ ಎಂದು ಲಾರಾ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧ ವಿಂಡೀಸ್ ತಂಡ 5 ದಿನಗಳ ಕಾಲ ಉಳಿಯಬಹುದು ಎಂದು ನಾನು ಭಾವಿಸಿಲ್ಲ. ಆದ್ದರಿಂದ ಅವರು ಈ ಪಂದ್ಯಗಳನ್ನು ನಾಲ್ಕು ದಿನಗಳ ಪಂದ್ಯ ಎಂದೇ ಪರಿಗಣಿಸಬೇಕು. ಮತ್ತು ಇದರಲ್ಲೇ ಮುನ್ನಡೆ ಪಡೆದು ಉಳಿಸಿಕೊಳ್ಳಬೇಕಿದೆ ಎಂದಿದ್ದಾರೆ.
ವಿಂಡೀಸ್ ಪರ 131 ಟೆಸ್ಟ್ ಪಂದ್ಯಗಳಲ್ಲಿ 11,953 ರನ್ ಗಳಿಸಿರುವ ಲಾರಾ, ಇಂಗ್ಲಿಷ್ ವಾತಾವರಣಕ್ಕೆ ಒಗ್ಗಿಕೊಳ್ಳಬಹುದಾದ ಗುಣ ವಿಂಡೀಸ್ ತಂಡಕ್ಕಿರಬೇಕು ಎಂದಿದ್ದಾರೆ.
1988ರ ಬಳಿಕ ಇಂಗ್ಲೆಂಡ್ ನೆಲದಲ್ಲಿ ವಿಂಡೀಸ್ ತಂಡ ಟೆಸ್ಟ್ ಸರಣಿ ಗೆದ್ದಿಲ್ಲ. ಆದರೂ ಎರಡೂ ತಂಡಗಳ ನಡುವೆ ಸಮಬಲದ ಪೈಪೋಟಿ ನಿರೀಕ್ಷೆ ಇದೆ. ವಿಂಡೀಸ್ ತಂಡ ಗೆಲ್ಲಬೇಕಾದರೆ ಮೊದಲ ಪಂದ್ಯದ ಮೊದಲ ದಿನದಿಂದಲೇ ಉತ್ತಮ ಪ್ರದರ್ಶನ ನೀಡಬೇಕು ಎಂದು ತಿಳಿಸಿದ್ದಾರೆ.