ಮೆಲ್ಬೋರ್ನ್: ಗಾಯದಿಂದ ನೊಂದು ಬಲಿಷ್ಠವಲ್ಲದ ಭಾರತ ತಂಡದೆದುರು ಸರಣಿ ಸೋಲು ಕಂಡಿರುವುದಕ್ಕೆ ತವರಿನ ತಂಡವನ್ನು ಮೈಕಲ್ ಕ್ಲಾರ್ಕ್ ಟೀಕಿಸಿದ್ದಾರೆ. ಆಸೀಸ್ ಗೆಲುವಿಗಾಗಿ ಆಕ್ರಮಣಕಾರಿಯಾಗಿ ಆಡುವ ಬದಲು ಸೋಲಿನ ಭಯದಿಂದ ಆಡಿದ್ದೇ ಸರಣಿ ಕಳೆದುಕೊಳ್ಳುವುದಕ್ಕೆ ಕಾರಣ ಎಂದು ಹೇಳಿದ್ದಾರೆ.
ಮಂಗಳವಾರ ಗಾಯದ ಹೊಡೆತದಿಂದ ಸರಣಿಯುದ್ದಕ್ಕೂ ನೊಂದಿದ್ದ ಭಾರತ ತಂಡ ಕೊನೆಯ ಪಂದ್ಯವನ್ನು 2-1ರಲ್ಲಿ ಗೆಲ್ಲುವ ಮೂಲಕ ಬಾರ್ಡರ್ ಗವಾಸ್ಕರ್ ಸರಣಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಆಸೀಸ್ ಮಾಜಿ ನಾಯಕ ಕ್ಲಾರ್ಕ್ ತವರಿನಲ್ಲಿ ಸರಣಿ ಸೋಲು ಕಂಡಿರುವುದಕ್ಕೆ ನಾಯಕ ಟೀಮ್ ಪೇನ್ರನ್ನು ಹೊಣೆ ಮಾಡುವುದನ್ನು ತಿರಸ್ಕರಿಸಿದ್ದಾರೆ.
ಸರಣಿಯುದ್ದಕ್ಕೂ ನಾವು ಕೆಲವು ಹಂತಗಳಲ್ಲಿ ತುಂಬಾ ಋಣಾತ್ಮಕವಾಗಿದ್ದೆವು. ಆಕ್ರಮಣಕಾರಿಯಾಗಿ ಆಡಿ ಪಂದ್ಯ ಗೆಲ್ಲುವ ಬದಲು ಸೋಲುತ್ತೇವೆ ಎಂಬ ಭಾವನೆಯೇ ಹೆಚ್ಚಾಗಿತ್ತು ಎಂದು ಕ್ಲಾರ್ಕ್ ಸ್ಪೋರ್ಟ್ಸ್ ವೆಬ್ಸೈಟ್ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಆಸ್ಟ್ರೇಲಿಯನ್ನರ ನೆಗೆಟಿವ್ ಮನಸ್ಥಿತಿಯೇ ಅವರನ್ನು ಹಿಮ್ಮೆಟ್ಟಿಸಿತು ಎಂದು ಅಭಿಪ್ರಾಯಪಟ್ಟಿದ್ದಾರೆ. ನಾವು ಮೊದಲ ಎಸೆತದಿಂದ ಕೊನೆಯ ಎಸೆತದವರೆಗೂ ಪಂದ್ಯವನ್ನು ಗೆಲ್ಲುವ ಮನಸ್ಥಿತಿಯಲ್ಲಿ ಆಡಬೇಕು. ಆದರೆ ನಮ್ಮ ಆಟಗಾರರಲ್ಲಿ ಆ ಭಾವನೆ ಕಂಡುಬರಲಿಲ್ಲ ಎಂದು ಆಸೀಸ್ ಮಾಜಿ ನಾಯಕ ಹೇಳಿದ್ದಾರೆ.
ಈ ಸರಣಿ ಆರಂಭಕ್ಕೂ ಮುನ್ನ ಮೈಕಲ್ ಕ್ಲಾರ್ಕ್ ಕೊಹ್ಲಿ ಇಲ್ಲದೆ ಭಾರತ ತಂಡ ಪಂದ್ಯ ಗೆದ್ದರೆ ಭಾರತೀಯರು ಅದನ್ನು ವರ್ಷ ಪೂರ್ತಿ ಸಂಭ್ರಮಿಸಬಹುದು ಎಂದು ಹೇಳಿಕೆ ನೀಡಿದ್ದರು. ಇದೀಗ ಟೀಮ್ ಇಂಡಿಯಾ ಸರಣಿಯನ್ನೇ ಗೆದ್ದು ಆಸ್ಟ್ರೇಲಿಯನ್ನರಿಗೆ ತಿರುಗೇಟು ನೀಡಿದೆ. ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 328 ರನ್ಗಳ ಗುರಿಯನ್ನು ಭಾರತ ತಂಡ ಯಶಸ್ವಿಯಾಗಿ ಚೇಸ್ ಮಾಡಿ ಗೆದ್ದುಕೊಂಡಿದೆ.
ಇದನ್ನು ಓದಿ:ಆಸ್ಟ್ರೇಲಿಯಾ ವಿರುದ್ಧ ಭಾರತ ಗೆಲುವು: ಸಂತಸ ಹಂಚಿಕೊಂಡ ಪೂಜಾರ, ಸುಂದರ್, ಸಿರಾಜ್ ಕುಟುಂಬ