ದಾವೋಸ್: ನಾನು ಕ್ರಿಕೆಟಿಗನಾಗಿದ್ದಾಗ ಪಾಕಿಸ್ತಾನ, ಭಾರತದ ಮೇಲೆ ಪಾಬಲ್ಯ ಸಾಧಿಸಿತ್ತು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿಶ್ವ ಆರ್ಥಿಕ ವೇದಿಕೆಯ 50ನೇ ವಾರ್ಷಿಕ ಶೃಂಗಸಭೆಯಲ್ಲಿ ಹೇಳಿದ್ದಾರೆ. ಈ ಮೂಲಕ ಅವರು ಕ್ರಿಕೆಟ್ ಅನ್ನು ದೇಶದ ಅಭಿವೃದ್ಧಿ ಜೊತೆ ಹೋಲಿಸಿ ಮಾತನಾಡಿದ್ದಾರೆ.
60ರ ದಶಕದಲ್ಲಿ, ಪಾಕಿಸ್ತಾನವು ಉನ್ನತಿಯಲ್ಲಿತ್ತು. ಏಷ್ಯಾದ ಇತರೆ ರಾಷ್ಟ್ರಗಳಿಗೆ ಪಾಕಿಸ್ತಾನ ಆದರ್ಶಪ್ರಾಯವಾಗಿತ್ತು. ನಾನು ಆ ಭರವಸೆಯೊಂದಿಗೆ ಬೆಳೆದಿದ್ದೇನೆ. ಆದರೆ ದುರದೃಷ್ಟವಶಾತ್ ಪ್ರಜಾಪ್ರಭುತ್ವವು ಪಾಕಿಸ್ತಾನದಲ್ಲಿ ನೆಲೆಗೊಳ್ಳಲು ಸಾಧ್ಯವಾಗದ ಕಾರಣ ನಾವು ಬೆಳವಣಿಗೆ ಕಾಣಲು ಸಾಧ್ಯವಾಗಲಿಲ್ಲ. ಪ್ರಜಾಪ್ರಭುತ್ವ ಕುಂಠಿತಗೊಂಡಾಗ, ಸೈನ್ಯ ಅಧಿಕಾರಕ್ಕೆ ಬಂತು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ನಾನು ಕ್ರಿಕೆಟ್ ಆಡುತ್ತಿದ್ದಾಗ, ಭಾರತವು ನಮ್ಮ ಗಾತ್ರಕ್ಕಿಂತ ಏಳು ಪಟ್ಟು ಹೆಚ್ಚಿತ್ತು ಆದರೂ ನಾವು ಭಾರತವನ್ನ ಸೋಲಿಸುತ್ತಿದ್ದೆವು. ಹಾಕಿ ಮತ್ತು ಇತರ ಹಲವು ಆಟಗಳಲ್ಲಿಯೂ ನಾವು ಎತ್ತರದಲ್ಲಿದ್ದೆವು ಎಂದಿದ್ದಾರೆ.
ಮಾನವ ಮತ್ತು ನೈಸರ್ಗಿಕ ಸಂಪನ್ಮೂಲಗಳ ವಿಷಯದಲ್ಲಿ ಪಾಕಿಸ್ತಾನವು ಯಾವಾಗಲೂ ಶ್ರೀಮಂತ ರಾಷ್ಟ್ರವಾಗಿದ್ದು, ಹಾಕಿ ಮತ್ತು ಇತರ ಹಲವು ಕ್ರೀಡೆಗಳಲ್ಲಿ ಪಾಕ್ ಒಂದು ದೊಡ್ಡ ಶಕ್ತಿಯಾಗಿದೆ. ಆದರೆ ಕಳೆದ ಕೆಲವು ದಶಕಗಳಿಂದ ಭ್ರಷ್ಟಾಚಾರ ನಮ್ಮ ಬೆಳವಣಿಗೆಯ ಹಳಿ ತಪ್ಪಿಸಿದೆ ಎಂದಿದ್ದಾರೆ.
88 ಟೆಸ್ಟ್ ಪಂದ್ಯಗಳನ್ನಾಡಿರುವ ಇಮ್ರಾನ್ ಖಾನ್ 362 ವಿಕೆಟ್ ಪಡೆದು, 3,807 ರನ್ ಗಳಿಸಿದ್ದಾರೆ. 175 ಏಕದಿನ ಪಂದ್ಯಗಳಿಂದ 182 ವಿಕೆಟ್ ಪಡೆದಿದ್ದು, 3,709 ರನ್ ಗಳಿಸಿದ್ದಾರೆ.