ಅಬುಧಾಬಿ: ಭಾರತ ಭವಿಷ್ಯದ ಸ್ಟಾರ್ ಎಂದೇ ಬಿಂಬಿತವಾಗಿದ್ದ 2018ರ ಅಂಡರ್ 19 ವಿಶ್ವಕಪ್ನಲ್ಲಿ ಮಿಂಚಿದ್ದ ಯುವ ಬೌಲರ್ ಕಮಲೇಶ್ ನಾಗರಕೋಟಿ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ರಿಂದ ಗಾಯ ನಿರ್ವಹಣೆಯ ಪಾಠ ಕಲಿಯಬೇಕೆಂದು ಬಯಸಿದ್ದಾರೆ.
ಪೃಥ್ವಿ ಶಾ ನೇತೃತ್ವದ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ನಾಗರಕೋಟಿ 2018ರಲ್ಲೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸೇರ್ಪಡೆಯಾದರೂ ಗಾಯ ಅವರಿಗೆ ಒಮ್ಮೆಯೂ ಆಡುವ ಅವಕಾಶ ನೀಡಲಿಲ್ಲ. ಆದರೆ, ಈ ಬಾರಿ ಫಿಟ್ ಆಗಿದ್ದು, ದಿಗ್ಗಜರಿರುವ ತಂಡದಲ್ಲಿ ಪದಾರ್ಪಣೆ ಮಾಡಲು ಹಾತೊರೆಯುತ್ತಿದ್ದಾರೆ. 15.5 ಕೋಟಿಗೆ ಕೆಕೆಆರ್ ಸೇರಿರುವ ಕಮಿನ್ಸ್ರಿಂದ ಮಹತ್ವದ ಸಲಹೆಗಳನ್ನು ಪಡೆಯಲು ಯುವ ಬೌಲರ್ ಕಾಯುತ್ತಿದ್ದಾರೆ.
"ಕಮ್ಮಿನ್ಸ್ ದೀರ್ಘಾವಧಿಯವರೆಗೆ ಗಾಯಕ್ಕೀಡಾಗಿದ್ದರು. ಆದ್ದರಿಂದ ಅವರು ಆ ಮೂರು ನಾಲ್ಕು ವರ್ಷಗಳಲ್ಲಿ ಅವರ ಮನಸ್ಥಿತಿ ಏನಾಗಿತ್ತು. ಅವರು ತಮ್ಮನ್ನು ತಾವೂ ಹೇಗೆ ಪ್ರೇರೇಪಿಸಿಕೊಂಡರು ಮತ್ತು ಪುನಾರಾಗಮನಕ್ಕೆ ಹೇಗೆ ಸಿದ್ದರಾದರು" ಎಂದು ನಾನು ಕೇಳಲು ಬಯಸುತ್ತೇನೆ ಎಂದು ನಾಗರಕೋಟಿ ತಿಳಿಸಿದ್ದಾರೆ.
ನನಗೆ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಕಮ್ಮಿನ್ಸ್ರಿಂದ ಸಲಹೆಗಳನ್ನು ಪಡೆಯುತ್ತೇನೆ. ಬ್ಯಾಟ್ಸ್ಮನ್ಗಳ ವಿಚಾರಕ್ಕೆ ಬಂದರೆ ನಮ್ಮ ಕೋಚ್ ಬ್ರೆಂಡನ್ ಮೆಕಲಮ್ಗೆ ನೆಟ್ಸ್ನಲ್ಲಿ ಬೌಲಿಂಗ್ ಮಾಡುವುದು ನನ್ನ ಕನಸು. ನಾನು ಅವರ ಆಟವನ್ನು ನೋಡುತ್ತಾ ಬೆಳೆದಿದ್ದೇನೆ. ಅವರ ಬ್ಯಾಟಿಂಗ್ ಶೈಲಿ ನಿಜಕ್ಕೂ ಆಕ್ರಮಣಕಾರಿ ಮತ್ತು ಅನನ್ಯ. ಓಪನರ್ಗಳ ಮನಸ್ಥಿತಿಯ ಬಗ್ಗೆ ನಾನು ಅವರಿಂದ ಸಾಕಷ್ಟನ್ನು ಕಲಿಯಬಹುದೆಂದು ನಾನು ಭಾವಿಸಿದ್ದೇನೆ. ಅವರು ಸ್ವತಃ ಓಪನಿಂಗ್ ಬ್ಯಾಟ್ಸ್ಮನ್ ಆಗಿದ್ದರಿಂದ ಆರಂಭಿಕರ ಮನಸ್ಥಿತಿಯನ್ನು ರೀಡ್ ಮಾಡಲು ಅವರು ನನಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ನಾನು ಭಾವಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
2018ರ ಐಪಿಎಲ್ ಹರಾಜಿನಲ್ಲಿ ಕಮಲೇಶ್ ನಾಗರಕೋಟಿಯನ್ನು ತೀವ್ರ ಪೈಪೋಟಿಯ ನಡುವೆ ಕೆಕೆಆರ್ 3.2 ಕೋಟಿ ರೂ.ನೀಡಿ ಖರೀದಿಸಿತ್ತು.