ನವದೆಹಲಿ: ಬಂಗಾಳ ಹುಲಿ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಆಗುತ್ತಾರೆಂದು 2007ರಲ್ಲೇ ವಿರೇಂದ್ರ ಸೆಹ್ವಾಗ್ ಭವಿಷ್ಯ ನುಡಿದಿದ್ದರಂತೆ. ಈ ಮಾತಿಯನ್ನು ಸ್ವತಃ ಸೆಹ್ವಾಗ್ ಅವರೇ ಬಹಿರಂಗಪಡಿಸಿದ್ದಾರೆ. ಭಾರತ ತಂಡದ ಮಾಜಿ ನಾಯಕ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗುತ್ತಾರೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು 2007 ರಲ್ಲಿ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಸೆಹ್ವಾಗ್ ಭವಿಷ್ಯ ನುಡಿದಿದ್ದರಂತೆ. ಈ ವಿಚಾರವನ್ನು ಸೆಹ್ವಾಗ್ ಖಾಸಗಿ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ನನಗೆ ಗಂಗೂಲಿ ಬಿಸಿಸಿಐ ಅಧ್ಯಕ್ಷನಾಗಿ ಆಯ್ಕೆಯಾದ ವಿಚಾರ ಕೇಳಿದ ತಕ್ಷಣ 12 ವರ್ಷಗಳ ಹಿಂದೆ ನಾನು ಹೇಳಿದ್ದ ಭವಿಷ್ಯ ನೆನೆಪಿಸಿಕೊಂಡೆ. ಇದೀಗ ಅಂದು ಹೇಳಿದ್ದ ಭವಿಷ್ಯದಲ್ಲಿ ಒಂದು ನೆರವೇರಿದೆ. ಇದೀಗ ದಾದಾ ಪಶ್ಚಿಮ ಬಂಗಾಳದ ಸಿಎಂ ಆಗುವುದೊಂದೇ ಬಾಕಿಯಿದೆ ಎಂದು ತಿಳಿಸಿದ್ದಾರೆ.
"2007ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ಟೌನ್ನಲ್ಲಿ ನಡೆಯುತ್ತಿದ್ದ ಪಂದ್ಯದಲ್ಲಿ ನಾನು ಮತ್ತು ಜಾಫರ್ ಬೇಗ ಔಟಾಗಿದ್ದವು. ಸಚಿನ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರಿಂದ ಆಗ ತಾನೆ ಟೀಂ ಇಂಡಿಯಾಗೆ ಕಮ್ಬ್ಯಾಕ್ ಮಾಡಿದ್ದ ಗಂಗೂಲಿಗೆ ತಾವೇ ಬ್ಯಾಟಿಂಗ್ ಮಾಡುವುದಾಗಿ ಹೇಳಿ ಬ್ಯಾಟಿಂಗ್ ನಡೆಸಿದ್ದರು. ಆ ಒತ್ತಡದ ಪರಿಸ್ಥಿತಿಯಲ್ಲೂ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರು" ಎಂದು ಹೇಳಿದ್ದಾರೆ.
"ಆ ದಿನವೇ ನಮ್ಮಲ್ಲಿ ಯಾರಾದರೂ ಬಿಸಿಸಿಐ ಪ್ರೆಸಿಡೆಂಟ್ ಆಗಬಹುದ ಎನ್ನುವುದಾದರೆ ಅದು ದಾದಾ ಮಾತ್ರ ಎಂದು ನಾವೆಲ್ಲರೂ ಮಾತನಾಡಿಕೊಂಡಿದ್ದೆವು. ಅದೇ ಸಂದರ್ಭದಲ್ಲಿ ನಾನು ದಾದಾ ಪಶ್ಚಿಮ ಬಂಗಾಳದ ಸಿಎಂ ಆಗುವರು ಎಂದು ಹೇಳಿದ್ದೆ. ಇದೀಗ ಒಂದು ಭವಿಷ್ಯ ನಿಜವಾಗಿದೆ, ಮತ್ತೊಂದು ಬಾಕಿಯಿದೆ, ಅದಕ್ಕಾಗಿ ಕಾಯೋಣ"ಎಂದಿದ್ದಾರೆ.
ಸೌರವ್ ಗಂಗೂಲಿ ಅಕ್ಟೋಬರ್ 23 ರಂದು ಭಾರತ ಕ್ರಿಕೆಟ್ ನಿಯಂತ್ರಣ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮೂಲಕ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಬಿಸಿಸಿಐ ಅಧ್ಯಕ್ಷನಾದ ಚೊಚ್ಚಲ ಕ್ರಿಕೆಟಿಗ ಎನಿಸಿಕೊಂಡಿದ್ದರು.
ಸೆಹ್ವಾಗ್ ಭವಿಷ್ಯ ನುಡಿದಂತೆ ಬಂಗಾಳದ ಮಹಾರಾಜ ಸೌರವ್ ಗಂಗೂಲಿಗೆ ಈಗಾಗಲೇ ಬಿಜೆಪಿಯಿಂದ ಸಿಎಂ ಆಫರ್ ಬರುತ್ತಿದೆಯಾದರೂ ಸ್ವತಃ ಗಂಗೂಲಿ ರಾಜಕೀಯದಿಂದ ದೂರ ಉಳಿಯುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಗಂಗೂಲಿ ರಾಜಕೀಯಕ್ಕೆ ಬಂದರೆ ಪಶ್ಚಿಮ ಬಂಗಾಳದ ಸಿಎಂ ಆಗುವ ಅವಕಾಶ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.