ಮುಂಬೈ: ಟೀಂ ಇಂಡಿಯಾ - ಆಸ್ಟ್ರೇಲಿಯಾ ನಡುವೆ ಡಿಸೆಂಬರ್ ತಿಂಗಳಲ್ಲಿ ಕ್ರಿಕೆಟ್ ಸರಣಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ವಿದೇಶಿ ಪ್ರವಾಸ ಕೈಗೊಳ್ಳಲಿದೆ.
ಡಿಸೆಂಬರ್ 17ರಿಂದ ಟೆಸ್ಟ್ ಸರಣಿ ಆರಂಭಗೊಳ್ಳಲಿದ್ದು, ನಾಲ್ಕು ಟೆಸ್ಟ್ ಪಂದ್ಯಗಳು ನಡೆಯಲಿವೆ. ಆದರೆ, ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆ ಭಾರತಕ್ಕೆ ವಾಪಸ್ ಆಗಲಿದ್ದಾರೆ.
ಈಗಾಗಲೇ ಭಾರತೀಯ ಕ್ರಿಕೆಟ್ ಮಂಡಳಿಗೆ ವಿರಾಟ್ ಕೊಹ್ಲಿ ಇದರ ಬಗ್ಗೆ ಮಾಹಿತಿ ನೀಡಿದ್ದು, ಅದಕ್ಕೆ ಬಿಸಿಸಿಐ ಇದೀಗ ಗ್ರೀನ್ ಸಿಗ್ನಲ್ ನೀಡಿದೆ. ಈ ಸಮಯದಲ್ಲಿ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ಚೊಚ್ಚಲ ಮಗು ಆಗುವ ಸಮಯವಾಗಿರುವ ಕಾರಣ ಅವರೊಂದಿಗೆ ಕಾಲ ಕಳೆಯಲು ವಿರಾಟ್ ವಾಪಸ್ ಆಗಲಿದ್ದಾರೆ. ಉಳಿದ ಟೆಸ್ಟ್ ಪಂದ್ಯಗಳಲ್ಲಿ ರಹಾನೆ ತಂಡವನ್ನ ಮುನ್ನಡೆಸುವ ಸಾಧ್ಯತೆ ದಟ್ಟವಾಗಿದೆ.
ಟೀಂ ಇಂಡಿಯಾ ನಾಯಕ ವಿರಾಟ್ ಹಾಗೂ ಅನುಷ್ಕಾ ಮೊದಲ ಮಗುವಿನ ಆಗಮನದಲ್ಲಿದ್ದು, ಜನವರಿ ಮೊದಲ ವಾರದಲ್ಲಿ ಅವರಿಗೆ ಮಗು ಜನನವಾಗುವ ಸಾಧ್ಯತೆ ಇದೆ. ಆಸ್ಟ್ರೇಲಿಯಾ ವಿರುದ್ದ ನಾಲ್ಕು ಟೆಸ್ಟ್ ಪಂದ್ಯಗಳು ಅಡಿಲೇಡ್ (ಹೊನಲು ಬೆಳಕು, ಡಿಸೆಂಬರ್ 17-21), ಮೆಲ್ಬೋರ್ನ್ (ಡಿಸೆಂಬರ್ 26-30), ಸಿಡ್ನಿ (ಜನವರಿ 7-11, 2021) ಮತ್ತು ಬ್ರಿಸ್ಬೇನ್ (ಜನವರಿ 15-19) ನಲ್ಲಿ ನಡೆಯಲಿವೆ.
ನವೆಂಬರ್ 12ರಂದು ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ನವೆಂಬರ್ 27, 29 ಮತ್ತು ಡಿಸೆಂಬರ್ 2ರಂದು ಏಕದಿನ ಪಂದ್ಯ, ಡಿಸೆಂಬರ್ 4, 6 ಮತ್ತು 9 ರಂದು ಟಿ-20 ಸರಣಿಯನ್ನಾಡಲಿದೆ. ಡಿಸೆಂಬರ್ 17ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ.