ಮುಂಬೈ: ಭಾರತದ ಹೆಚ್ಚು ಪ್ರಸಿದ್ಧ ವ್ಯಕ್ತಿಗಳ ರ‍್ಯಾಂಕಿಂಗ್ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದ್ದು, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ಕಳೆದ ಜೂನ್ನಲ್ಲಿ ಫೋರ್ಬ್ಸ್ ಬಿಡುಗಡೆ ಮಾಡಿದ್ದ ಶ್ರೀಮಂತ ಕ್ರೀಡಾಪಟುಗಳ ಲಿಸ್ಟ್ನಲ್ಲಿ ಏಕೈಕ ಭಾರತೀಯನಾಗಿ ಕಾಣಿಸಿಕೊಂಡಿದ್ದ ವಿರಾಟ್ ಕೊಹ್ಲಿ, ಇದೀಗ ಭಾರತೀಯ ಪ್ರಸಿದ್ಧ ವ್ಯಕ್ತಿಗಳ ಸಾಲಿನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
2019ರಲ್ಲಿ ಕೊಹ್ಲಿ ಬಾಲಿವುಡ್ ದಿಗ್ಗಜರನ್ನೇ ಹಿಂದಿಕ್ಕಿರುವುದು ಆಶ್ಚರ್ಯಕರವಾಗಿದೆ. ವಿರಾಟ್ ನಂತರ ಅಕ್ಷಯ್ ಕುಮಾರ್ ಎರಡನೇ ಸ್ಥಾನದಲ್ಲಿದ್ದರೆ, 3ನೇ ಸ್ಥಾನದಲ್ಲಿ ಸಲ್ಮಾನ್ ಖಾನ್, 4ನೇ ಸ್ಥಾನದಲ್ಲಿ ಅಮಿತಾಬ್ ಬಚ್ಚನ್, 5ನೇ ಸ್ಥಾನದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇದ್ದಾರೆ. ನಂತರ ಶಾರುಖ್, ರಣವೀರ್ ಸಿಂಗ್, ಅಲಿಯಾ ಭಟ್, ಸಚಿನ್ ತೆಂಡೂಲ್ಕರ್ ಹಾಗೂ ದೀಪಿಕಾ ಪಡುಕೋಣೆ ಟಾಪ್ 10ನಲ್ಲಿ ಕಾಣಿಸಿಕೊಂಡಿದ್ದಾರೆ.
ವಿಶೇಷವೆಂದರೆ 2016ರ ಬಳಿಕ ಟಾಪ್ 10 ಸೆಲೆಬ್ರಿಟಿಗಳಲ್ಲಿ ಇಬ್ಬರು ಮಹಿಳೆಯರು ಕಾಣಿಸಿಕೊಂಡಿದ್ದಾರೆ. ಇನ್ನು ಭಾರತದ ಟಾಪ್ 100 ಸೆಲೆಬ್ರೆಟಿಗಳಲ್ಲಿ 14 ಜನ ಕ್ರಿಕೆಟಿಗರು ಕಾಣಿಸಿಕೊಂಡಿದ್ದಾರೆ. ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, ಧೋನಿ(5), ಸಚಿನ್(9), ರೋಹಿತ್(11), ಪಂತ್(30), ಹಾರ್ದಿಕ್(31), ಬುಮ್ರಾ(33), ಕೆ.ಎಲ್.ರಾಹುಲ್(34), ಧವನ್(35), ಜಡೇಜಾ(51), ಕುಲ್ದೀಪ್ ಯಾದವ್(61) ಮಿಥಾಲಿ ರಾಜ್(88), ಸ್ಮೃತಿ ಮಂಧಾನ(90), ಹರ್ಮನ್ಪ್ರೀತ್ ಕೌರ್(91) ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ.