ಮ್ಯಾಂಚೆಸ್ಟರ್: ಬುಧವಾರ ನಡೆದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಧೋನಿಯನ್ನು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿಸಲ್ಪಟ್ಟಿದ್ದು ತಂಡದ ಆಡಳಿತ ಮಂಡಳಿಯ ತಂತ್ರಗಾರಿಕೆಯ ಪ್ರಮಾದ ಎಂದು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹಾಗೂ ಲಕ್ಷ್ಮಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಆರಂಭಿಕರಾದ ರೋಹಿತ್, ರಾಹುಲ್ ಹಾಗೂ ಕೊಹ್ಲಿ ಕೇವಲ ಒಂದೊಂದು ರನ್ ಗಳಿಸಿ ಔಟಾಗಿದ್ದರು. ಆ ಸಂದರ್ಭದಲ್ಲಿ ಅನುಭವಿ ಇಂತಹ ಸನ್ನಿವೇಶಗಳನ್ನು ಹಲವು ಬಾರಿ ಎದುರಿಸಿದ್ದ ಧೋನಿಯನ್ನು ಕಳುಹಿಸುವ ಬದಲು ಯುವ ಆಟಗಾರರಾದ ಪಾಂಡ್ಯ, ಪಂತ್ರನ್ನು ಕಳುಹಿಸಿ ಕೊಹ್ಲಿ ಹಾಗೂ ಆಡಳಿತ ಮಂಡಳಿ ಮಹಾ ಪ್ರಮಾದ ಎಸಗಿದೆ ಎಂದು ವಿವಿಎಸ್ ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ.
ಪಂದ್ಯದ ನಂತರ ಚಾಟ್ ಶೋದಲ್ಲಿ ಮಾತನಾಡಿರುವ ವಿವಿಎಸ್ ಲಕ್ಷ್ಮಣ್, ಆರಂಭಿಕ ಮೂವರು ಒಂದಂಕಿ ಮೊತ್ತಕ್ಕೆ ಔಟಾದ ಸಂದರ್ಭದಲ್ಲಿ ಕಾರ್ತಿಕ್, ಪಾಂಡ್ಯ ಬದಲಿಗೆ ಧೋನಿಯನ್ನು ಕಳುಹಿಸಬೇಕಿತ್ತು. ಧೋನಿ ಪಂತ್ ಜೊತೆ ಒಳ್ಳೆಯ ಇನ್ನಿಂಗ್ಸ್ ಕಟ್ಟುತ್ತಿದ್ದರು ಎಂದು ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಗಂಗೂಲಿ ಕೂಡ ಲಕ್ಷ್ಮಣ್ರ ಅಭಿಪ್ರಾಯವನ್ನು ಎತ್ತಿ ಹಿಡಿದಿದ್ದು, ಧೋನಿ ಮೊದಲೇ ಬಂದಿದ್ದರೆ ಸುದೀರ್ಘ ಇನ್ನಿಂಗ್ಸ್ ಬಳಿಕ ಅವರು ಔಟಾದರೂ ನಮ್ಮ ಮುಂದೆ ಕಾರ್ತಿಕ್, ಪಾಂಡ್ಯ, ಜಡೇಜಾ ಇರುತ್ತಿದ್ದರು. ಆದರೆ ಕಾರ್ತಿಕ್ರನ್ನು ಬೇಗ ಕಳುಹಿಸಲಾಯಿತು. ಅವರು ಆರಂಭದಿಂದಲೇ ಒತ್ತಡವನ್ನು ನಿಭಾಯಿಸುವಲ್ಲಿ ವಿಫಲರಾದರು ಎಂದು ಗಂಗೂಲಿ ಹೇಳಿದ್ದಾರೆ.