ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿಸ್ಡನ್ ಪ್ರಕಟಿಸಿರುವ ಹತ್ತು ವರ್ಷಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಟಾಪ್ 5 ಕ್ರಿಕೆಟಿಗರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
31 ವರ್ಷದ ಕೊಹ್ಲಿ ಈ ದಶಕದಲ್ಲಿ ವಿಶ್ವದ ಇತರೆ ಆಟಗಾರರಿಗಿಂತ 5,775 ರನ್ ಹಾಗೂ 22 ಶತಕಗಳಲ್ಲಿ ಮುನ್ನಡೆ ಸಾಧಿಸಿಕೊಂಡಿದ್ದಾರೆ. ಅಲ್ಲದೆ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ 50 ಕ್ಕಿಂತ ಹೆಚ್ಚು ಸರಾಸರಿಯನ್ನು ಕಾಪಾಡಿಕೊಂಡಿರುವ ವಿಶ್ವದ ಏಕೈಕ ಬ್ಯಾಟ್ಸ್ಮನ್ ಆಗಿದ್ದಾರೆ. ಅಲ್ಲದೆ ಕೊಹ್ಲಿ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ತಂಡದ ನಾಯಕ ಹಾಗೂ ಮೊದಲ ಸಲ ಸತತ 7 ಟೆಸ್ಟ್ ಪಂದ್ಯಗಳನ್ನು ಗೆದ್ದ ಭಾರತ ತಂಡದ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಕೊಹ್ಲಿ ಜೊತೆಗೆ ಆಸ್ಟ್ರೇಲಿಯಾ ತಂಡದ ಯಶಸ್ವಿ ಟೆಸ್ಟ್ ಬ್ಯಾಟ್ಸ್ಮನ್ ಸ್ಟಿವ್ ಸ್ಮಿತ್, ಆಸ್ಟ್ರೇಲಿಯಾ ಮಹಿಳಾ ತಂಡದ ಆಲ್ರೌಂಡರ್ ಎಲಿಸ್ ಪೆರ್ರೆ, ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್ ಹಾಗೂ ಡೇಲ್ ಸ್ಟೈನ್ ವಿಸ್ಡನ್ ದಶಕದ ಟಾಪ್ 5 ಆಟಗಾರರಾಗಿ ಆಯ್ಕೆಯಾಗಿದ್ದಾರೆ.

ಸ್ಮಿತ್ 71 ಟೆಸ್ಟ್ಗಳಲ್ಲಿ 26 ಶತಕ ಹಾಗೂ 27 ಅರ್ಧಶತಕಗಳ ಸಹಿತ 7,070 ರನ್ ಗಳಿಸಿದ್ದಾರೆ. ಪೆರ್ರಿ 112 ಏಕದಿನ ಹಾಗೂ 11 ಟಿ20 ಪಂದ್ಯಗಳಿಂದ 4,023 ರನ್ ಹಾಗೂ 289 ವಿಕೆಟ್ ಪಡೆದಿದ್ದಾರೆ. ಪೆರ್ರಿ ಒಂದು ವರ್ಷದಲ್ಲಿ ಟಿ20 ಕ್ರಿಕೆಟ್ನಲ್ಲಿ 1,000 ರನ್ ಹಾಗೂ100 ವಿಕೆಟ್ ಪಡೆದ ಏಕೈಕ ಕ್ರಿಕೆಟರ್ ಎಂಬ ವಿಶ್ವದಾಖಲೆಯನ್ನು ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾದ ಎಬಿಡಿ 420 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಂದ 20,014 ರನ್ ಗಳಿಸಿದ್ದಾರೆ. ಡೇಲ್ ಸ್ಟೈನ್ 262 ಅಂತಾರಾಷ್ಟ್ರೀಯ ಪಂದ್ಯಗಳಿಂದ 696 ವಿಕೆಟ್ ಪಡೆದು ವಿಸ್ಡನ್ ದಶಕದ 5 ಅತ್ಯುತ್ತಮ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.