ನವದೆಹಲಿ: ಭಾನುವಾರ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಫೈನಲ್‌ನಲ್ಲಿ ಉತ್ತರ ಪ್ರದೇಶ ತಂಡ ಬಲಿಷ್ಠ ಮುಂಬೈ ತಂಡವನ್ನು ಎದುರಿಸಲಿದೆ. ಈ ಪಂದ್ಯದ ಮೇಲೆ ರಾಷ್ಟ್ರೀಯ ಆಯ್ಕೆದಾರರು ಕಣ್ಣಿಟ್ಟಿದ್ದು, ಅದರಲ್ಲೂ ಮುಂಬೈ ತಂಡದ ನಾಯಕ ಪೃಥ್ವಿ ಶಾ ಮೇಲೆ ಹೆಚ್ಚಿನ ನೀಗಾ ಇಟ್ಟಿದೆ. ಹಾಗೆಯೇ ಉತ್ತರ ಪ್ರದೇಶ ತಂಡವು ಕೂಡ ಶಾ ಅವರನ್ನು ಕಟ್ಟಿಹಾಕಲು ರಣತಂತ್ರ ರೂಪಿಸುತ್ತಿದೆ.
ಪ್ರಸ್ತುತ ವಿಜಯ್ ಹಜಾರೆ ಟೂರ್ನಿಯಲ್ಲಿ ಪೃಥ್ವಿ ಶಾ ಅತ್ಯದ್ಭುತ ಪ್ರದರ್ಶನ ತೋರಿದ್ದಾರೆ. ಪೃಥ್ವಿ ಶಾ 7 ಪಂದ್ಯಗಳಿಂದ 754 ರನ್ಗಳಿಸಿದ್ದಾರೆ. ಇದರಲ್ಲಿ ಒಂದು ದ್ವಿಶತಕ ಸೇರಿದಂತೆ 3 ಶತಕ ಗಳಿಸಿದ್ದಾರೆ. ಒಂದು ವೇಳೆ, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ವಿಶ್ರಾಂತಿ ನೀಡಿದರೆ, ಶಾಗೆ ಅವಕಾಶ ನೀಡುವ ಬಗ್ಗೆ ಯೋಚಿಸಲಾಗಿದೆ.
ಕೋಚ್ ಜ್ಞಾನೇಂದ್ರ ಪಾಂಡೆ ಅವರ ನೇತೃತ್ವದಲ್ಲಿ ಯುವ ನಾಯಕ ಕರಣ್ ಶರ್ಮಾ ಉತ್ತರ ಪ್ರದೇಶ ತಂಡವನ್ನ ಉತ್ತಮವಾಗಿ ಮುನ್ನಡಿಸಿದ್ದಾರೆ. ಎಡಗೈ ವೇಗಿ ಯಶ್ ದಯಾಳ್ ತಂಡಕ್ಕೆ ಯಾವಗ ಬೇಕಾದರೂ ಮೇಲುಗೈ ತಂದುಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಇವರಿಗೆ ಆಕಿಬ್ ಖಾನ್ ಉತ್ತಮ ಸಾಥ್ ನೀಡುತ್ತಿದ್ದಾರೆ.
ಓದಿ : ವಿಜಯ್ ಹಜಾರೆಯಲ್ಲಿ ಅಬ್ಬರ: ಮಯಾಂಕ್ ಅಗರವಾಲ್ ದಾಖಲೆ ಬ್ರೇಕ್ ಮಾಡಿದ ಪೃಥ್ವಿ ಶಾ!
ಇನ್ನು ಮುಂಬೈ ತಂಡ ಬಲಾಢ್ಯವಾಗಿದ್ದು, ಅನುಭವಿಗಳಿಂದ ತುಂಬಿದೆ. ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್, ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆದಿತ್ಯ ತಾರೆ, ಆಲ್‌ರೌಂಡರ್‌ಗಳಾದ ಶಮ್ಸ್ ಮುಲಾನಿ ಮತ್ತು ಶಿವಂ ದುಬೆ ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ.
ಅನುಭವಿ ವೇಗಿ ಧವಳ ಕುಲಕರ್ಣಿ (14 ವಿಕೆಟ್) ನೇತೃತ್ವದ ಮುಂಬೈ ಬೌಲರ್ ಪಡೆ ತುಷಾರ್ ದೇಶಪಾಂಡೆ ಮತ್ತು ಪ್ರಶಾಂತ್ ಸೋಲಂಕಿ, ತನುಷ್ ಕೋಟಿಯನ್ ಮತ್ತು ಶಮ್ಸ್ ಮುಲಾನಿ ತಂಡದ ಬೌಲಿಂಗ್ ಶಕ್ತಿಯನ್ನ ಹೆಚ್ಚಿಸಿದ್ದಾರೆ.
ಮೂರು ಬಾರಿ ವಿಜಯ ಹಜಾರೆ ಟ್ರೋಫಿ ಗೆದ್ದಿರುವ ಮುಂಬೈ ತಂಡ ನಾಲ್ಕನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದರೆ, ಇತ್ತ ಯುಪಿ ತಂಡ ಎರಡನೇ ಬಾರಿ ಪ್ರಶಸ್ತಿ ಎತ್ತಿ ಹಿಡಿಯುವ ಕಾತರದಲ್ಲಿದೆ. ಒಟ್ಟಾರೆ ಈ ಬಾರಿಯ ವಿಜಯ ಹಜಾರೆ ಟ್ರೋಫಿ ಪಂದ್ಯ ರೋಚಕತೆಯಿಂದ ಕೂಡಿದ್ದು, ಭಾನುವಾರ ಬೆಳಗ್ಗೆ 9 ಗಂಟೆಗೆ ಪಂದ್ಯ ಆರಂಭವಾಗಲಿದೆ.