ಕೇಪ್‌ಟೌನ್: ತರಬೇತಿ ಶಿಬಿರಕ್ಕೂ ಮುನ್ನ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ಇಬ್ಬರು ಆಟಗಾರರಿಗೆ ಕೋವಿಡ್ 19 ಪಾಸಿಟಿವ್ ವರದಿ ಬಂದಿದೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಪ್ರಕಟಣೆ ಹೊರಡಿಸಿದೆ.
ಈಗಾಗಲೇ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಗಳ ಸರಣಿಯನ್ನು ರದ್ದುಗೊಳಿಸಿತ್ತು. ತರಬೇತಿ ಶಿಬಿರದ ಆರಂಭಕ್ಕೂ ಮುನ್ನ ನಡೆಸಿದ್ದ ಪರೀಕ್ಷೆಯಲ್ಲಿ ಇಬ್ಬರು ಆಟಗಾರರಿಗೆ ಪಾಸಿಟಿವ್ ದೃಢಪಟ್ಟಿದೆ ಎಂದು ಗುರುವಾರ ಸಿಎಸ್ಎ ಖಚಿತಪಡಿಸಿದೆ.
ಆಗಸ್ಟ್ 18ರಿಂದ 22ರ ವರೆಗೆ 5 ದಿನಗಳ ತರಬೇತಿ ಶಿಬಿರವನ್ನು ಸ್ಕುಕುಜದಲ್ಲಿ ಆಯೋಜಿಸಿದೆ. ಇದರಲ್ಲಿ ಪಾಲ್ಗೊಳ್ಳುವ 30ಕ್ಕೂ ಹೆಚ್ಚು ಪ್ರಮುಖ ಆಟಗಾರರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ಇಬ್ಬರ ಫಲಿತಾಂಶ ಪಾಸಿಟಿವ್ ಬಂದಿದೆ. ಆದ್ದರಿಂದ ಈ ಇಬ್ಬರು ಆಟಗಾರರು ಕ್ಯಾಂಪ್ನಲ್ಲಿ ಭಾಗವಹಿಸುತ್ತಿಲ್ಲ.
ಆದರೆ ಈ ಆಟಗಾರರ ಹೆಸರನ್ನು ಸಿಎಸ್ಎ ಬಹಿರಂಗಪಡಿಸಿಲ್ಲ. ಸದ್ಯ ಅವರು ವೈದ್ಯಕೀಯ ನಿಗಾದಲ್ಲಿದ್ದಾರೆ ಎಂದು ತಿಳಿಸಿದೆ. 5 ದಿನಗಳ ಕ್ಯಾಂಪ್ ಮಂಗಳವಾರದಿಂದ ಆರಂಭವಾಗಲಿದೆ.