ಮುಂಬೈ: ಭಾರತದ ಹಿರಿಯ ಕ್ರಿಕೆಟಿಗ ಎಸ್ ಶ್ರೀಶಾಂತ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿ ಬಂಧಿತರಾಗಿದ್ದ ವೇಳೆ ಅನುಭವಿಸಿದ ಯಾತನೆಯನ್ನು ನೆನೆಪಿಸಿಕೊಂಡಿದ್ದಾರೆ. ಅಂದು ತಮ್ಮನ್ನು ಟೆರರಿಸ್ಟ್ ವಾರ್ಡ್ನಲ್ಲಿಟ್ಟು ಅಧಿಕಾರಿಗಳು ವಿಚಾರಣೆ ನಡೆಸಿದ್ದರು ಎಂದು ಹೇಳಿದ್ದಾರೆ.
ಅಧಿಕಾರಿಗಳು ಪ್ರತಿದಿನ 16-17 ಗಂಟೆಗಳ ಕಾಲ ನನ್ನನ್ನು ಹಿಂಸಿಸುತ್ತಿದ್ದರು. ಇದು 12 ದಿನಗಳ ಕಾಲ ಹೀಗೆ ನಡೆದಿತ್ತು. ತಮ್ಮ ಕುಟುಂಬದವರು ನೀಡಿದ ಪ್ರೇರಣೆಯಿಂದ ಜೀವನ ಸಾಗುವಂತಾಯಿತು ಎಂದು ಅವರು ನೆನಪಿಸಿಕೊಂಡಿದ್ದಾರೆ.
ನೀವು ನನ್ನ ಜೀವನವನ್ನು ಒಮ್ಮೆ ನೋಡುವುದಾದರೆ, ಮ್ಯಾಚ್ ಪಾರ್ಟಿ ಮುಗಿದ ತತ್ಕ್ಷಣವೇ ನನ್ನನ್ನು ಭಯೋತ್ಪಾದಕ ವಾರ್ಡ್ಗೆ ಕರೆದುಕೊಂಡು ಹೋಗಲಾಯಿತು. 12 ದಿನಗಳ ಕಾಲ ದಿನದಲ್ಲಿ 16 ರಿಂದ 17 ಗಂಟೆಗಳ ಕಾಲ ನನ್ನನ್ನು ಹಿಂಸಿಸುತ್ತಿದ್ದರು. ಆ ಸಮಯದಲ್ಲಿ ನಾನು ಯಾವಾಗಲು ನನ್ನ ಮನೆ ಮತ್ತು ಕುಟುಂಬದವರ ಬಗ್ಗೆ ಚಿಂತಿಸುತ್ತಿದ್ದೆ ಎಂದು ಶ್ರೀಶಾಂತ್ ಇನ್ಸ್ಟಾಗ್ರಾಮ್ ಲೈವ್ನಲ್ಲಿ ಆದರ್ಶ್ ರಾಮನ್ಗೆ ತಿಳಿಸಿದ್ದಾರೆ.
ಕೆಲವು ದಿನಗಳ ನಂತರ ನನ್ನ ಅಣ್ಣ ನನ್ನನ್ನು ಭೇಟಿ ಮಾಡಲು ಬಂದರು. ನಂತರ ನನ್ನ ಕುಟುಂಬ ಚೆನ್ನಾಗಿದೆ ಎಂದು ನನಗೆ ತಿಳಿಯಿತು. ನನ್ನ ಕುಟುಂಬ ಸದಸ್ಯರು ನನ್ನನ್ನು ಪ್ರೇರೇಪಿಸಿದರು ಹಾಗೂ ನನ್ನ ಬೆನ್ನ ಹಿಂದೆ ನಿಂತರು ಎಂದು ಶ್ರೀ ಹೇಳಿಕೊಂಡಿದ್ದಾರೆ.
ಇನ್ನು ಬಾಲಿವುಡ್ ನಾಯಕ ನಟ ಸುಶಾಂತ್ ಸಾವಿನ ಬಗ್ಗೆ ಪ್ರತಿಕ್ರಿಯಿಸಿ, ಆ ಸಂದರ್ಭದಲ್ಲಿ ನಾನು ತರಬೇತಿಯಲ್ಲಿದ್ದೆ. ನನ್ನ ಮಡದಿ ನನಗೆ ವಾಯ್ಸ್ ಸಂದೇಶ ಕಳುಹಿಸಿದ್ದಳು, ನಾನು ನೋಡಿರಲಿಲ್ಲ. ಆದರೆ, ನಾನು ಕಾರಲ್ಲಿ ಕುಳಿತಿರಬೇಕಾದರೆ ಅಂತಾರ್ಜಾಲದಲ್ಲಿ ವಿವಿಧ ರೀತಿಯ ಪೋಸ್ಟ್ಗಳನ್ನು ಗಮನಿಸಿದ ನಂತರ ತಿಳಿಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಆದರೆ, ಇದೇ ಸಂದರ್ಭದಲ್ಲಿ ತಾವೂ ಜೈಲಿಗೆ ಹೋಗಿದ್ದ ಸಂದರ್ಭದಲ್ಲಿ ಯಾರು ತಮ್ಮ ಫೋಟೋವನ್ನು ತೆಗೆದಿರಲಿಲ್ಲ. ನನ್ನ ಅದೃಷ್ಟ, ಇಲ್ಲದಿದ್ದರೆ ನನ್ನ ಆ ಅವಸ್ಥೆಯ ಫೋಟೋಗಳನ್ನು ನನ್ನ ಮಕ್ಕಳು ನೋಡಬೇಕಾಗಿತ್ತು. ಆ ದಿನ ನನ್ನ ಪಾಲಿನ ದುಃಖದ ದಿನವಾಗಿತ್ತು ಎಂದು ಶ್ರೀಶಾಂತ್ ಹೇಳಿಕೊಂಡಿದ್ದಾರೆ.