ಶಾರ್ಜಾ : ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೇಸಿಂಗ್ ವೇಳೆ ಧೋನಿ ನಿಧಾನಗತಿ ಬ್ಯಾಟಿಂಗ್ ನಡೆಸಿ ಕೊನೆಯ ಓವರ್ನಲ್ಲಿ ತಮ್ಮ ಬ್ಯಾಟಿಂಗ್ ಪರಾಕ್ರಮ ತೋರಿರುವುದನ್ನು ಮಾಜಿ ಕ್ರಿಕೆಟಿಗ ಗಂಭೀರ್ ಪ್ರಶ್ನಿಸಿದ್ದಾರೆ.
ಶಾರ್ಜಾ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ 4ನೇ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ತಂಡ ಮೊದಲು ಬ್ಯಾಟಿಂಗ್ ನಡೆಸಿ 217 ರನ್ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಸಿಎಸ್ಕೆ 20 ಓವರ್ಗಳಲ್ಲಿ 200 ರನ್ ಗಳಿಸಿ 16 ರನ್ಗಳಿಂದ ಸೋಲು ಕಂಡಿತ್ತು.
217 ರನ್ಗಳ ಬೃಹತ್ ಗುರಿ ಬೆನ್ನಟ್ಟುವ ಸಂದರ್ಭದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಧೋನಿ ದೊಡ್ಡ ಹೊಡೆತಗಳಿಗೆ ಪ್ರಯತ್ನಿಸಲಿಲ್ಲ, ಬದಲಾಗಿ ಕೊನೆಯ ಓವರ್ನಲ್ಲಿ ಗೆಲುವು ಕೈ ಮೀರಿ ಹೋದ ಮೇಲೆ ಸತತ ಮೂರು ಸಿಕ್ಸರ್ ಬಾರಿಸಿದ್ರೆ ಏನು ಪ್ರಯೋಜನ. ಅದೆಲ್ಲಾ ಕೇವಲ ವೈಯಕ್ತಿಕ ದಾಖಲೆಗೆ ಸೇರುತ್ತವೆ ಎಂದು ಗಂಭೀರ್ ಹೇಳಿದ್ದಾರೆ.
ಚೆನ್ನೈ ತಂಡ 14 ಓವರ್ಗಳಿಗೆ 5 ವಿಕೆಟ್ ಕಳೆದುಕೊಂಡು 114 ರನ್ ಗಳಿಸಿರುವಾಗ ಧೋನಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಆಗಮಿಸಿದ್ರು. ಆ ಸಮಯದಲ್ಲಿ ಗೆಲುವಿಗೆ ಇನ್ನೂ 103 ರನ್ ಬೇಕಾಗಿದ್ದವು. ಆದರೆ, ತಾವು ಬ್ಯಾಟಿಂಗ್‌ಗೆ ಬಾರದೆ, ಗಾಯಕ್ವಾಡ್, ಕರ್ರನ್ ಹಾಗೂ ಜಾಧವ್ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸಿದ್ದರು. ಕೊನೆಗೆ ಧೋನಿ 17 ಎಸೆತಗಳಲ್ಲಿ 3 ಸಿಕ್ಸರ್ ಸಹಿತ 29 ರನ್ಗಳಿಸಿ ಔಟಾಗದೇ ಉಳಿದರು.