ದುಬೈ: ಜಗತ್ತಿನಾದ್ಯಂತ ವ್ಯಾಪಿಸಿರುವ ಕೊರೊನಾ ಭೀತಿ ಹೊರತಾಗಿಯೂ ನಿಗದಿತ ವೇಳಾಪಟ್ಟಿಯಂತೆ ಮುಂಬರುವ 7ನೇ ಆವೃತ್ತಿಯ ಟಿ-20 ವಿಶ್ವಕಪ್ ಜರುಗಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹೇಳಿದೆ.
ಈ ಬಾರಿ ಆತಿಥ್ಯ ವಹಿಸಿರುವ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ-20 ವಿಶ್ವಕಪ್-2020 ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೂ ನಡೆಯಲಿದೆ. ಅದಕ್ಕಾಗಿ ಏಳು ಕ್ರೀಡಾಂಗಣಗಳು ಸಜ್ಜಾಗಿವೆ.
ಕೊರೊನಾ ವೈರಸ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಟಿ-20 ವಿಶ್ವಕಪ್ ಸ್ಥಳೀಯ ಸಂಘಟನಾ ಸಮಿತಿಯು ಸಂಬಂಧಿಸಿದ ಅಧಿಕಾರಗಳೊಂದಿಗೆ ನಿಕಟ ಸಂಪರ್ಕ ಹೊಂದಿರಲಿದೆ. ನಿಗದಿಯಂತೆ ಮುಂದುವರೆಯಲು ನಾವು ಚಿಂತನೆ ನಡೆಸುತ್ತಿದ್ದೇವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಐಸಿಸಿ ತಿಳಿಸಿದೆ.
ಕೊರೊನಾ ಭೀತಿಗೆ ಕ್ರೀಡಾ ಕ್ಷೇತ್ರ ತಲ್ಲಣಗೊಂಡಿದ್ದು, ಎಲ್ಲಾ ಮಾದರಿಯ ಕ್ರಿಕೆಟ್ ಪಂದ್ಯಗಳನ್ನು ರದ್ದುಪಡಿಸಲಾಗಿದೆ. ವಿಶ್ವದ ಅತ್ಯಂತ ಶ್ರೀಮಂತ ಟೂರ್ನಿ ಎನಿಸಿರುವ ಐಪಿಎಲ್ಅನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿದೆ.
ಈಗಾಗಲೇ ಭಾರತ–ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ–ನ್ಯೂಜಿಲೆಂಡ್ ಏಕದಿನ ಸರಣಿಗಳನ್ನು ರದ್ದು ಮಾಡಲಾಗಿದೆ. ಶ್ರೀಲಂಕಾ ಪ್ರವಾಸದಿಂದ ಇಂಗ್ಲೆಂಡ್ ತಂಡ ಹೊರ ನಡೆದಿದೆ. ಮುಂದಿನ 60 ದಿನಗಳವರೆಗೆ ಕ್ರಿಕೆಟ್ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.