ಮೆಲ್ಬೋರ್ನ್: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್‌ನಿಂದ ವಿಶ್ವಾದ್ಯಂತ ಸ್ಥಗಿತಗೊಂಡಿರುವ ಕ್ರಿಕೆಟ್ ಪಂದ್ಯಾವಳಿ ನಡೆಸಲು ಆಸ್ಟ್ರೇಲಿಯಾದ ಡಾರ್ವಿನ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
ಕ್ರಿಕೆಟ್ ಡಾಟ್ ಕಾಮ್ ಪ್ರಕಾರ, ಪಂದ್ಯಾವಳಿಯಲ್ಲಿ ಏಳು ಡಾರ್ವಿನ್ ಪ್ರೀಮಿಯರ್ ಗ್ರೇಡ್ ಕ್ಲಬ್‌ಗಳು ಭಾಗವಹಿಸಲಿದ್ದು, ಎಂಟನೇ ತಂಡವು ಆಹ್ವಾನಿತವಾಗಿದೆ. ಎಂಟನೇ ತಂಡವೂ 'ಏಷ್ಯಾ ಕಪ್' ಸ್ಪರ್ಧೆಯ ಅತ್ಯುತ್ತಮ ಹನ್ನೊಂದು ಆಟಗಾರರನ್ನು ಒಳಗೊಂಡಿದೆ.
ರೌಂಡ್ - ರಾಬಿನ್ ಶೈಲಿಯ ಈ ಪಂದ್ಯಾವಳಿ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ 15 ಪಂದ್ಯಗಳು ಜೂನ್ 6 - 8ರ ನಡುವೆ ನಡೆಯಲಿದೆ. ಈ ಪಂದ್ಯಗಳು ಮರ್ರಾರಾ ಕ್ರಿಕೆಟ್ ಮೈದಾನ, ಗಾರ್ಡನ್ಸ್ ಓವಲ್ ಮತ್ತು ಕ್ಯಾಜಲಿಯ ಓವಲ್ನಲ್ಲಿ ಜರುಗಲಿದೆ.
ಮೇ 21 ರಿಂದ ಈ ಪ್ರದೇಶದಲ್ಲಿ ಯಾವುದೇ ಕೋವಿಡ್-19 ಪ್ರಕರಣಗಳು ಕಂಡು ಬಂದಿಲ್ಲ. ಹೀಗಾಗಿ 200 ಕ್ರಿಕೆಟ್ ಅಭಿಮಾನಿಗಳಿಗೆ ಪಂದ್ಯ ವೀಕ್ಷಿಸಲು ಅವಕಾಶವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಡಾರ್ವಿನ್ ಕ್ರಿಕೆಟ್ ಮ್ಯಾನೇಜ್ಮೆಂಟ್ ಅಧ್ಯಕ್ಷ ಲಾಚ್ಲಾನ್ ಬೇರ್ಡ್ ಪ್ರಕಾರ, ಪಂದ್ಯದ ಚೆಂಡುಗಳ ಮೇಲೆ ಲಾಲಾರಸದ ಬಳಕೆಯನ್ನು ನಿಷೇಧಿಸುವುದು ವಿವಾದಾಸ್ಪದವಾಗಿದೆ. ಕ್ರಿಕೆಟ್ ಆಸ್ಟ್ರೇಲಿಯಾದಿಂದ ಅಧಿಕೃತ ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 18 ರಿಂದ ನವೆಂಬರ್ 15 ರವರೆಗೆ ಪುರುಷರ ಟಿ 20 ವಿಶ್ವಕಪ್ ಟೂರ್ನಿ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿದ್ದು, ಕೊರೊನಾ ವೈರಸ್ ಹರಡುವ ಹಿನ್ನೆಲೆ ಪಂದ್ಯಾವಳಿ ನಡೆಯುವುದು ಅನುಮಾನವಾಗಿದೆ.