ಚೆನ್ನೈ: ಮೇಘಾಲಯ ತಂಡದ ಪುನೀತ್ ಬಿಶ್ತ್ ಪ್ರಸ್ತುತ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಮೆಂಟ್ನಲ್ಲಿ ಮಿಜೋರಾಂ ತಂಡದ ವಿರುದ್ಧದ ಪಂದ್ಯದಲ್ಲಿ 17 ಸಿಕ್ಸರ್ ಸಿಡಿಸಿ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ದಾಖಲೆ ಸರಿಗಟ್ಟಿದ್ದಾರೆ.
ಚೆನ್ನೈನಲ್ಲಿ ಮಿಜೋರಾಂ ವಿರುದ್ಧ ನಡೆದ ಪಂದ್ಯದಲ್ಲಿ ಬಿಶ್ತ್ ಕೇವಲ 51 ಎಸೆತಗಳಲ್ಲಿ ಅಜೇಯ 146 ರನ್ ದಾಖಲಿಸಿದ್ದಾರೆ. ಅವರ ಇನ್ನಿಂಗ್ಸ್ನಲ್ಲಿ ಕೇವಲ 6 ಬೌಂಡರಿಗಳಿದ್ದರೆ, 17 ಭರ್ಜರಿ ಸಿಕ್ಸರ್ಸ್ ಸೇರಿದ್ದವು.
ಬಿಶ್ತ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮೇಘಾಲಯ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 230 ರನ್ ಗಳಿಸಿತ್ತು. ಬಿಶ್ತ್ಗೆ ನೆರವು ನೀಡಿದ್ದ ಯೋಗೇಶ್ ತಿವಾರಿ 53 ರನ್ ಗಳಿಸಿದರು. 231 ರನ್ಗಳ ಗುರಿ ಬೆನ್ನತ್ತಿದ ಮಿಜೋರಾಂ ಕೇವಲ 100 ರನ್ಗಳಿಗೆ ಆಲೌಟ್ ಆಗಿ 130 ರನ್ಗಳ ಸೋಲು ಕಂಡಿತು.
ಗೇಲ್ ದಾಖಲೆ ಸರಿಗಟ್ಟಿದ ಬಿಶ್ತ್
ಇನ್ನು ಈ ಪಂದ್ಯದಲ್ಲಿ ಬಿಶ್ತ್ 17 ಸಿಕ್ಸರ್ ಸಿಡಿಸುವ ಮೂಲಕ ಟಿ-20 ಕ್ರಿಕೆಟ್‌ನಲ್ಲಿ ಒಂದೇ ಇನ್ನಿಂಗ್ಸ್ನಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಹಾಗೂ ವಿಶ್ವದ 2ನೇ ಬ್ಯಾಟ್ಸ್ಮನ್ ಎನಿಸಿಕೊಂಡರು. 2017ರಲ್ಲಿ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನಲ್ಲಿ ಕ್ರಿಸ್ ಗೇಲ್ 18 ಸಿಕ್ಸರ್ ಸಿಡಿಸಿದ್ದರು. ಅವರು ಆ ಪಂದ್ಯದಲ್ಲಿ 69 ಎಸೆತಗಳಲ್ಲಿ ಅಜೇಯ 146 ರನ್ ಗಳಿಸಿದ್ದರು.
2ನೇ ಸ್ಥಾನದಲ್ಲೂ ಅವರೇ ಇದ್ದು, 2013ರಲ್ಲಿ ಆರ್ಸಿಬಿ ಪರ 17 ಸಿಕ್ಸರ್ ಸಿಡಿಸಿದ್ದರು. ಇದೀಗ ಬಿಶ್ತ್ ಗೇಲ್ ಜೊತೆ ಜಂಟಿ 2ನೇ ಸ್ಥಾನ ಹಂಚಿಕೊಂಡಿದ್ದಾರೆ. ಭಾರತೀಯರಲ್ಲಿ ಶ್ರೇಯಸ್ ಅಯ್ಯರ್ 2019ರ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ 15 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು.
ಇದನ್ನು ಓದಿ:ಭಾರತ ತಂಡ ಗಬ್ಬಾದಲ್ಲಿ ಗೆದ್ದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿ : ಶೋಯಬ್ ಅಖ್ತರ್