ಪುಣೆ: ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದ ಫೀಲ್ಡಿಂಗ್ ವೇಳೆ ಗಾಯಗೊಂಡಿರುವ ಶ್ರೇಯಸ್ ಐಯ್ಯರ್ ಮುಂದಿನ 2 ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಅವರ ಜಾಗಕ್ಕೆ ಈಗಾಗಲೇ ಟಿ-20 ಕ್ರಿಕೆಟ್ನಲ್ಲಿ ಪದಾರ್ಪಣೆ ಸರಣಿಯಲ್ಲಿ ತಮ್ಮ ತಾಕತ್ತು ಪ್ರದರ್ಶಿಸಿರುವ ಸೂರ್ಯಕುಮಾರ್ ಯಾದವ್, ಶುಕ್ರವಾರ ನಡೆಯುವ 2ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
ಅಹಮದಾಬಾದ್ನಲ್ಲಿ ನಡೆದಿದ್ದ ಟಿ-20 ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದ ಸೂರ್ಯಕುಮಾರ್ಗೆ 2 ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಮೊದಲ ಪಂದ್ಯದಲ್ಲೇ 31 ಎಸೆತಗಳನ್ನು ಎದುರಿಸಿ 57 ರನ್ ಗಳಿಸಿದ್ದ ಅವರು, ಕೊನೆಯ ಟಿ-20ಯಲ್ಲಿ 17 ಎಸೆತಗಳಲ್ಲಿ 32 ರನ್ ಗಳಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು.
ಇದೀಗ 4ನೇ ಕ್ರಮಾಂಕದಲ್ಲಿ ಆಡುತ್ತಿದ್ದ ಶ್ರೇಯಸ್ ಐಯ್ಯರ್ ಭುಜದ ಗಾಯಕ್ಕೆ ತುತ್ತಾಗಿರುವುದರಿಂದ ಆ ಸ್ಥಾನಕ್ಕೆ ಸೂರ್ಯಕುಮಾರ್ ಯಾದವ್ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ.
ಸೂರ್ಯಕುಮಾರ್ ಯಾದವ್ ಕೂಡ ಕಳೆದ 3 ಐಪಿಎಲ್ಗಳಲ್ಲೂ ಸತತ 400+ ರನ್ ಬಾರಿಸಿದ್ದರು. ಅವರು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 14 ಶತಕ ಹಾಗೂ 26 ಅರ್ಧಶತಕ ಸೇರಿ 5326 ರನ್, ಲಿಸ್ಟ್ ಎ(50 ಓವರ್) ಕ್ರಿಕೆಟ್ನಲ್ಲಿ 97 ಪಂದ್ಯಗಳಲ್ಲಿ 3 ಶತಕ ಹಾಗೂ 17 ಅರ್ಧಶತಕ ಸಹಿತ 2779 ರನ್. ಐಪಿಎಲ್ ಸೇರಿ 170 ಟಿ-20 ಪಂದ್ಯಗಳಿಂದ 3567 ರನ್ ಗಳಿಸಿದ್ದಾರೆ.
ಭಾರತ ತಂಡ ಈಗಾಗಲೇ ಮೊದಲ ಏಕದಿನ ಪಂದ್ಯವನ್ನು 66 ರನ್ಗಳಿಂದ ಗೆದ್ದು ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ. ಶುಕ್ರವಾರ ನಡೆಯುವ ಪಂದ್ಯದಲ್ಲಿ ಗೆದ್ದರೆ ಸರಣಿ ಭಾರತದ ಪಾಲಾಗಲಿದೆ. ಈಗಾಗಲೇ ಕೊಹ್ಲಿ ಬಳಗ ಟೆಸ್ಟ್ ತಂಡವನ್ನು 3-1ರಲ್ಲಿ, ಟಿ-20 ಸರಣಿಯನ್ನು 3-2ರಲ್ಲಿ ಗೆದ್ದಿದೆ.
ಇದನ್ನು ಓದಿ: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಅಯ್ಯರ್ ಔಟ್.. 14ನೇ ಐಪಿಎಲ್ಗೂ ಡೌಟ್!