ಮುಂಬೈ: ಇತ್ತೀಚೆಗೆ ನಿವೃತ್ತಿ ಘೋಷಿಸಿರುವ ಸುರೇಶ್ ರೈನಾ ಐಪಿಎಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪುನರಾಗಮನ ಮಾಡಬೇಕು. ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರಿದರೆ ಖಂಡಿತ ಭಾರತ ತಂಡಕ್ಕೆ ಆಯ್ಜೆಯಾಗಲಿದ್ದಾರೆ ಎಂದು ಕಾಮೆಂಟೇಟರ್ ಆಕಾಶ್ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 15ರಂದು ಎಂ.ಎಸ್.ಧೋನಿ ನಿವೃತ್ತಿ ಘೋಷಿಸಿದ ಕೆಲವೇ ಕ್ಷಣಗಳಲ್ಲಿ ರೈನಾ ಕೂಡ ನಿವೃತ್ತಿ ಘೋಷಿಸಿದ್ದರು. ಆದರೆ ಕೇವಲ 33 ವರ್ಷಕ್ಕೆ ನಿವೃತ್ತಿ ಪಡೆದಿರುವ ರೈನಾ ತಮ್ಮ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದರು. ಇದೀಗ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕೂಡ ಇದೇ ಮಾತನ್ನು ಹೇಳಿದ್ದು, ನಿವೃತ್ತಿಯಿಂದ ಹೊರಬರುವಂತೆ ಸೂಚಿಸಿದ್ದಾರೆ.
2020 ಹಾಗೂ 2021ರ ಎರಡು ಅದ್ಭುತ ಐಪಿಎಲ್ ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ರೈನಾ ಅವರನ್ನು ಟಿ20 ವಿಶ್ವಕಪ್ ತಂಡದಲ್ಲಿ ನೋಡಬಹುದು ಎಂದು ನಾನು ನಂಬುತ್ತೇನೆ. ಖಂಡಿತಾ ಇದು ಸಾಧ್ಯವಿದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಸುರೇಶ್ ರೈನಾ ಅವರೂ ಇನ್ನೂ ಸಾಕಷ್ಟು ಕ್ರಿಕೆಟ್ ಆಡಬಹುದು. ಅವರಿಗೆ ಕೇವಲ 33 ವರ್ಷ. ನಿವೃತ್ತಿ ಘೋಷಿಸುವ ಅಗತ್ಯವಿರಲಿಲ್ಲ. ಗಾಯದ ಸಮಸ್ಯೆ ಇದೆ ಎಂಬುದು ತಿಳಿದಿದೆ. ಯಾವ ಕ್ರಿಕೆಟಿಗ ಗಾಯಕ್ಕೆ ಒಳಗಾಗಿಲ್ಲ ಹೇಳಿ? ರೈನಾ ಸರ್ಜರಿಯ ನಂತರ ಫಿಟ್ ಮತ್ತು ಬಲಿಷ್ಠರಾಗಿದ್ದಾರೆ. ನನ್ನ ಪ್ರಕಾರ ಅವರು ಮೈದಾನಕ್ಕೆ ವಾಪಸಾಗಲು ಉತ್ಸಾಹಿತರಾಗಿದ್ದಾರೆಂದು ಅವರು ಹೇಳಿದ್ದಾರೆ.
‘ಐಪಿಎಲ್ ಏಪ್ರಿಲ್-ಮೇನಲ್ಲಿ ನಡೆದು, ಟಿ20 ವಿಶ್ವಕಪ್ ಅಕ್ಟೋಬರ್ನಲ್ಲಿ ನಡೆದಿದ್ದರೆ ಧೋನಿ ಕೂಡ ಇರುತ್ತಿದ್ದರು. ಆದರೆ ವಿಶ್ವಕಪ್ ಮುಂದೂಡಿದ್ದರಿಂದ ಅವರು ನಿವೃತ್ತಿ ಘೋಷಿಸಿದ್ದಾರೆ. ಆದರೆ ರೈನಾಗೆ ಅಂತಹ ಯಾವುದೇ ಸಮಸ್ಯೆ ಇಲ್ಲ ಎಂದು ಪ್ರಾಮಾಣಿಕವಾಗಿ ಹೇಳುತ್ತೇನೆ' ಅನ್ನೋದು ಚೋಪ್ರಾ ಮನದಾಳ.